

ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ
ತಾಲೂಕಿನ ಅರಳುಮಲ್ಲಿಗೆ ಕೆರೆಯಲ್ಲಿ ಶೇಖರಣೆಯಾಗಿದ್ದ ತ್ಯಾಜ್ಯ ನೀರನ್ನು ಸಂಗ್ರಹ ಮಾಡಿ ಪ್ರಯೋಗಾಲಯಕ್ಕೆ ಕಳುಹಿಸಿದ್ದು, ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ವಿಜಯಾ ತಿಳಿಸಿದರು.
ಅರಳುಮಲ್ಲಿಗೆ ಕೆರೆ ಅಂಗಳಕ್ಕೆ ಕಾರ್ಖಾನೆಗಳ ತ್ಯಾಜ್ಯ ನೀರನ್ನು ಟ್ಯಾಂಕರ್‌ಗಳ ಮೂಲಕ ರಾತ್ರಿ ವೇಳೆ ತುಂಬಿಕೊಂಡು ಬಂದು ರಸ್ತೆ ಅಂಚಿನ ರಾಜಕಾಲುವೆಗಳ ಮೂಲಕ ಕೆರೆ ಅಂಗಳಕ್ಕೆ ಹರಿಸುತ್ತಿರುವ ದೂರಿನ ಮೇರೆಗೆ ಕೆರೆಯಂಗಳ ಪರಿಶೀಲಿಸಿ ಮಾತನಾಡಿದರು.
ಯುವಸಂಚಲನ ಅಧ್ಯಕ್ಷ ಚಿದಾನಂದ್ ಮಾತನಾಡಿ, ನಿರ್ಮಾಣ ಹಂತದಲ್ಲಿರುವ ದಾಬಸ್‌ಪೇಟೆ-ದೊಡ್ಡಬಳ್ಳಾಪುರ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ರಾಜಕಾಲುವೆಗಳಿಗೆ ರಾತ್ರಿ ವೇಳೆ ಟ್ಯಾಂಕರ್‌ಗಳ ಮೂಲಕ ತ್ಯಾಜ್ಯ ಸುರಿಯಲಾಗುತ್ತಿದೆ. ಹೆದ್ದಾರಿ ನಿರ್ಮಾಣಕ್ಕಾಗಿ ಕೆರೆ ಅಂಗಳದಿಂದ ಮಣ್ಣು ಸಾಗಿಸಲು ನಿರ್ಮಿಸಿಕೊಂಡಿರುವ ರಸ್ತೆಗಳ ಮೂಲಕವು ಕೆರೆ ಅಂಗಳಕ್ಕೆ ಹೋಗಿ ಬೃಹತ್ ಹೊಂಡಗಳಿಗೂ ತ್ಯಾಜ್ಯ ಸುರಿಯಲಾಗಿದೆ. ಈಗಲೇ ಎಚ್ಚೆತ್ತುಕೊಂಡು ಬರುವ ತ್ಯಾಜ್ಯ ತುಂಬಿದ ಟ್ಯಾಂಕರ್‌ಗಳನ್ನು ತಡೆದು ಪೊಲೀಸರಿಗೆ ಒಪ್ಪಿಸಬೇಕು. ಇಲ್ಲವಾದರೆ ಈಗ ದೊಡ್ಡತುಮಕೂರು ಗ್ರಾಮದ ರೈತರು ಬೇರೆ ಊರಿನಿಂದ ನೀರು ತರಿಸಿಕೊಳ್ಳುತ್ತಿರುವ ಪರಿಸ್ಥಿಯೇ ಅರಳುಮಲ್ಲಿಗೆ ಕೆರೆ ಅಂಚಿನ ಗ್ರಾಮಗಳ ರೈತರಿಗೂ ಬರಲಿದೆ ಎಂದು ಎಚ್ಚರಿಸಿದರು.
ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ಸುತ್ತಲಿನ ಚಿಕ್ಕತುಮಕೂರು, ವೀರಾಪುರ, ದೊಡ್ಡತುಮಕೂರು ಕೆರೆಗಳಿಗೆ ಕಾಖಾನೆಗಳ ತ್ಯಾಜ್ಯ ನೀರು ಹರಿದು ಕೆರೆ ನೀರಿನ ಜತೆಗೆ ಅಂತರ್ಜಲವು ಸಂಪೂರ್ಣವಾಗಿ ಕಲುಷಿತಗೊಂಡಿದೆ. ಇದರಿಂದ ಜನರು ಎಚ್ಚೆತ್ತು ಹೋರಾಟ ತೀವ್ರಗೊಳಿಸಿದ ಹಿನ್ನೆಲೆಯಲ್ಲಿ ಈಗ ಕಾರ್ಖಾನೆ ಸಿಬ್ಬಂದಿ ರಾತ್ರಿ ವೇಳೆ ಟ್ಯಾಂಕರ್ ಮೂಲಕ ಅರಳುಮಲ್ಲಿಗೆ ಕೆರೆಗೆ ತ್ಯಾಜ್ಯ ತಂದು ಸುರಿಯುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.