ಜೆಜೆಎಂ ಕಾಮಗಾರಿ ಪರಿಶೀಲಿಸಿದ ಅಧಿಕಾರಿ

Officer inspecting JJM work
ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ನೋಡಲ್ ಅಧಿಕಾರಿಗಳ ತಂಡವು ನಿಡಗುಂದಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಅನುಷ್ಠಾನಗೊಳಿಸಿದ ಜೆಜೆಎಂ ಯೋಜನೆಯ ವಿವಿಧ ಕಾಮಗಾರಿಗಳ ಪರಿಶೀಲನೆ ನಡೆಸಿತು. ರಿಷಿ ಆನಂದ, ಅಲೋಕ ತಿವಾರಿ, ವೆಂಕಟೇಶ ವಂದಾಲ, ಶರಣಬಸವ ಬಿರಾದಾರ ಮತ್ತಿತರರಿದ್ದಾರೆ.
Published on

ವಿಜಯಪುರ: ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯಡಿ ನೀರು ಶುದ್ಧೀಕರಣ ಘಟಕ ಹಾಗೂ ಜಾಕ್‌ವೆಲ್ ನಿರ್ಮಾಣ ಕಾಮಗಾರಿ ಗುಣಮಟ್ಟದಿಂದ ನಿರ್ವಹಿಸಬೇಕು. ನಿಗದಿತ ಸಮಯದಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಕೇಂದ್ರ ಸರ್ಕಾರದ ಆರ್ಥಿಕ ಇಲಾಖೆಯ ಜಂಟಿ ಕಾರ್ಯದರ್ಶಿ ಅಲೋಕ ತಿವಾರಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ನಿಯೋಜಿಸಿರುವ ಕೇಂದ್ರ ನೋಡಲ್ ಅಧಿಕಾರಿಗಳ ತಂಡವು ಬುಧವಾರ ನಿಡಗುಂದಿ ತಾಲೂಕಿನ ಆಲಮಟ್ಟಿ, ಅಬ್ಬಿಹಾಳ, ಗುಡದಿನ್ನಿ ಹಾಗೂ ಬೇನಾಳ ಆರ್.ಸಿ. ಗ್ರಾಮಗಳಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ ಅನುಷ್ಠಾನಗೊಳಿಸಿದ ಜಲ ಜೀವನ ಮಿಷನ್ ಯೋಜನೆಯ ವಿವಿಧ ಕಾಮಗಾರಿಗಳ ಪರಿಶೀಲನೆ ನಡೆಸಿ ಅವರು ಮಾತನಾಡಿದರು.

ಜಲಧಾರೆ ಯೋಜನೆಯಡಿ ಆಲಮಟ್ಟಿ ಡ್ಯಾಮ್‌ನಿಂದ ಬಸವನಬಾಗೇವಾಡಿ, ಕೊಲ್ಹಾರ, ನಿಡಗುಂದಿ, ವಿಜಯಪುರ, ಬಬಲೇಶ್ವರ, ತಿಕೋಟಾ, ಇಂಡಿ ಹಾಗೂ ಚಡಚಣ ತಾಲೂಕಿಗೆ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಡಬ್ಲುೃಟಿಪಿ ನೀರು ಶುದ್ಧೀಕರಣ ಘಟಕ ನಿರ್ಮಾಣ ಮಾಡುವ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಜಾಕ್‌ವೆಲ್ ಕಾಮಗಾರಿ ಹಾಗೂ ವಿನ್ಯಾಸದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.

ವಂದಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಬ್ಬಿಹಾಳ ಹೊರವಲಯದಲ್ಲಿ ನಿರ್ಮಿಸುತ್ತಿರುವ ಆಡಳಿತತ್ಮಾಕ ವಿಭಾಗ, ಕ್ಲೋರಿನೇಷನ್ ಶೆಡ್, ಕ್ಯಾಸ್ಕೇಡ್ ಏರೇಟರ್ ಸೇರಿ ವಿವಿಧ ಪ್ರಗತಿ ಹಂತದ ಕಾಮಗಾರಿಗಳ ಗುಣಮಟ್ಟ ಪರಿಶೀಲಿಸಿದರು.

ನಂತರ ಬೇನಾಳ ಆರ್.ಸಿ. ಗ್ರಾ.ಪಂ. ಕಾರ್ಯಾಲಯಕ್ಕೆ ಭೇಟಿ ನೀಡಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಸಮಿತಿ (ವಿಡಬ್ಲೂೃಎಸ್‌ಸಿ) ಸದಸ್ಯರು, ವಾಟರ್‌ಮ್ಯಾನ್ ಹಾಗೂ ಗ್ರಾಮಸ್ಥರೊಂದಿಗೆ ಸಂವಾದ ನಡೆಸಿದರು.

ಅಲೋಕ ತಿವಾರಿ ಮಾತನಾಡಿ, ಕಮಿಟಿ ಸದಸ್ಯರು ಸಹ ನೀರಿನ ಪರೀಕ್ಷೆ ವಿಧಾನದ ಬಗ್ಗೆ ಸಮಗ್ರವಾಗಿ ತಿಳಿದುಕೊಳ್ಳಬೇಕು. ಜಲ ಮೂಲದಿಂದ ನೀರಿನ ಮಾದರಿ ಸಂಗ್ರಹಿಸಿ ಕ್ರಮ ಬದ್ಧವಾಗಿ ಗುಣಮಟ್ಟ ಪರೀಕ್ಷಿಸಬೇಕು ಎಂದು ಸಲಹೆ ನೀಡಿದರು. ಗ್ರಾಮದ ಗುಂಡಪ್ಪ ಮುತ್ತಲದಿನ್ನಿ ಅವರ ಮನೆಗೆ ಭೇಟಿ ನೀಡಿ ನೀರಿನ ಗುಣಮಟ್ಟವನ್ನು ಎಫ್‌ಟಿಕೆ ಕಿಟ್ ಮೂಲಕ ಪರೀಕ್ಷಿಸಿದರು. ಬಳಿಕ ಚಿಮ್ಮಲಗಿ ಗ್ರಾ.ಪಂ. ವ್ಯಾಪ್ತಿಯ ಗುಡದಿನ್ನಿ ಗ್ರಾಮಕ್ಕೆ ಭೇಟಿ ನೀಡಿ ಜೆಜೆಎಂ ಕಾಮಗಾರಿ ಪರಿಶೀಲಿಸಿದರು.

ಜಿ.ಪಂ. ಸಿಇಒ ರಿಷಿ ಆನಂದ, ನಿಡಗುಂದಿ ತಾ.ಪಂ. ಇಒ ವೆಂಕಟೇಶ ವಂದಾಲ, ಸಹಾಯಕ ನಿರ್ದೇಶಕ ಶರಣಬಸವ ಬಿರಾದಾರ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗದ ಸಹಾಯಕ ಅಭಿಯಂತರ ವಿ.ಬಿ. ಗೊಂಗಡಿ, ಕೇಂದ್ರ ತಾಂತ್ರಿಕ ಅಧಿಕಾರಿ ರಾಜೇಶಕುಮಾರ್ ಲುಹಾದಿಯಾ, ಬೇನಾಳ ಗ್ರಾಪಂ ಅಧ್ಯಕ್ಷ ರಮೇಶ ವಂದಾಲ, ಪಿಡಿಒ ಎ.ಎ. ಖೀಜಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net