ಬಿಸಿಯೂಟ ಸಹಾಯಕಿಯರ ಬದಲಾವಣೆಗೆ ಆದೇಶ

mkg1c
Published on

ಜಗಳೂರು: ತಾಲೂಕಿನ ಹಿರೇಮಲ್ಲನಹೊಳೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳಪೆ ಬಿಸಿಯೂಟ ತಯಾರಿಕೆ ಹಿನ್ನೆಲೆಯಲ್ಲಿ ಬಿಸಿಯೂಟ ಸಹಾಯಕಿಯರಿಬ್ಬರನ್ನು ಬದಲಿಸಲು ಅಕ್ಷರ ದಾಸೋಹ ಕಾರ್ಯಕ್ರಮದ ಶಿಕ್ಷಣಾಧಿಕಾರಿ ದುರುಗಪ್ಪ ಆದೇಶಿಸಿದ್ದಾರೆ.

‘ಬಿಸಿಯೂಟದಲ್ಲಿ ಹುಳು, ಕೂದಲು’ ಎಂದು ಜು.19ರಂದು ವಿಜಯವಾಣಿ ಪತ್ರಿಕೆಯಲ್ಲಿ ಪ್ರಕಟವಾದ ವರದಿ ಆಧರಿಸಿ ಪ್ರಭಾರ ಬಿಇಒ ಸುರೇಶ್ ಅವರ ಜತೆ ಬುಧವಾರ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಈ ಆದೇಶ ಹೊರಡಿಸಿದ್ದಾರೆ.

ಶಾಲೆಯ ಬಿಸಿಯೂಟ ಕೊಠಡಿಗೆ ತೆರಳಿ ಧಾನ್ಯ ಪರಿಶೀಲಿಸಿದ ದುರುಗಪ್ಪ, ಆಹಾರ ತಯಾರಿಕೆ ವೇಳೆ ಶುಚಿತ್ವ ನಿರ್ವಹಣೆ ಮಾಡದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಬಿಸಿಯೂಟ ಸಹಾಯಕರು ಗೈರಾದ ಬಗ್ಗೆ ತೀವ್ರ ಆಕ್ರೋಶ ಹೊರಹಾಕಿದರು.

ಸಹಾಯಕಿಯರಿಬ್ಬರನ್ನು ತಕ್ಷಣ ಬದಲಾಯಿಸಿ ಮತ್ತಿಬ್ಬರನ್ನು ಹೊಸದಾಗಿ ನೇಮಿಸಿಕೊಳ್ಳಿ. ಅಲ್ಲಿವರೆಗೂ ಬೇರೆ ಶಾಲೆಯಲ್ಲಿ ಹೆಚ್ಚುವರಿಯಾಗಿ ಕೆಲಸ ಮಾಡುವವರನ್ನು ತಾತ್ಕಾಲಿಕವಾಗಿ ನೇಮಿಸಿಕೊಳ್ಳಿ ಎಂದು ಅಕ್ಷರ ದಾಸೋಹ ಅಧಿಕಾರಿ ಶ್ರೀನಿವಾಸ್ ಅವರಿಗೆ ಸೂಚನೆ ನೀಡಿದರು.

ಮಧ್ಯಾಹ್ನದ ಬಿಸಿಯೂಟಕ್ಕೆ ಬೇಕಾದ ಎಲ್ಲ್ಲ ಧಾನ್ಯ ವಿತರಣೆ ಮಾಡಲಾಗಿದೆ. ಆದರೆ, ಸಹಾಯಕಿಯರ ಗೈರಿನಿಂದ ಮಕ್ಕಳಿಗೆ ಉಣಬಡಿಸಲು ಸಾಧ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಲಾಗುವುದು ಎಂದರು.

ಅಕ್ಷರ ದಾಸೋಹ ಅಧಿಕಾರಿ ಶ್ರೀನಿವಾಸ್‌ಗೌಡ, ಗ್ರಾಪಂ ಅಭಿವೃದ್ಧಿ ಅಧಿಕಾರಿ ಅರವಿಂದ್, ಸಿಆರ್‌ಪಿ ರವಿ ಪ್ರಕಾಶ್, ಇಸಿಒ ಹನುಮಂತಪ್ಪ, ಕರುನಾಡ ನವ ನಿರ್ಮಾಣ ವೇದಿಕೆ ರಾಜ್ಯಾಧ್ಯಕ್ಷ ಮಹಾಲಿಂಗಪ್ಪ ಹೊಳೆ, ಮುಖಂಡರಾದ ಚನ್ನಬಸಣ್ಣಗೌಡ, ಬಾಣೇಶ್, ಎಸ್‌ಡಿಎಂಸಿ ಅಧ್ಯಕ್ಷ ಸುರೇಶ್ ಬಾಬು, ತಳವಾರ್ ರಾಜು, ಆರ್.ವಿ. ಹೇಮರೆಡ್ಡಿ, ಪ್ರಭು, ಮಂಜಣ್ಣ, ಪ್ರೌಢಶಾಲಾ ಮುಖ್ಯಶಿಕ್ಷಕ ಪ್ರಕಾಶ್, ತಿರುಮಲ್ಲೇಶ್ವರ ಪ್ರೌಢಶಾಲೆ ಮುಖ್ಯಶಿಕ್ಷಕ ಪಾಲಯ್ಯ, ಬಸವರಾಜ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net