

ತುಮಕೂರು: ಕರೊನಾ ಹೊಡೆತದಿಂದ ಚೇತರಿಸಿಕೊಳ್ಳದ ಅಲೆಮಾರಿ ಕುಟುಂಬಗಳ ಕೈಹಿಡಿಯಲು ಸ್ನೇಹಿತರೊಡಗೂಡಿ ಜಿಲ್ಲಾಮಟ್ಟದ ಅಧಿಕಾರಿಯೊಬ್ಬರು ಮುಂದಾಗಿದ್ದಾರೆ.
ತಲೆಕೂದಲು ಪಡೆದು ಹೇರ್‌ಪಿನ್, ಸೂಜಿ, ಅರಿಶಿಣ, ಕುಂಕುಮ ಮತ್ತಿತರ ಸಣ್ಣಪುಟ್ಟ ವಸ್ತುಗಳು, ಬಾಗಿಲಿಗೆ ಹಾಕುವ ತೋರಣದ ಮಾದರಿಯ ವಿವಿಧ ಗೃಹ ಅಲಂಕಾರಕ ವಸ್ತುಗಳನ್ನು ಹಳ್ಳಿಗಳಿಗೆ ಹೋಗಿ ಮಾರಾಟ ಮಾಡುತ್ತಾ ಜೀವನ ನಡೆಸುವ ಕುಟುಂಬಗಳ ಬದುಕಿಗೆ ಕರೊನಾ ಪೆಟ್ಟು ನೀಡಿದೆ.
ಕರೊನಾ ಭೀತಿಯಿಂದ ಹಳ್ಳಿ, ಹಳ್ಳಿ ತಿರುಗುವ ಈ ಸಮುದಾಯದವರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಹಾಗಾಗಿ ದುಡಿಮೆ ಇಲ್ಲದೆ ಅಲೆಮಾರಿ ಸಮುದಾಯದ ನೂರಾರು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಅನ್ನಭಾಗ್ಯ ಯೋಜನೆಯಡಿ ಸರ್ಕಾರದಿಂದ ಅಕ್ಕಿ ಮಾತ್ರ ನೀಡಲಾಗಿದೆ. ಉಪ್ಪು, ಖಾರ, ಹುಣೆಸೆಹಣ್ಣು ಕೂಡ ಕೊಂಡುಕೊಳ್ಳಲಾಗದ ಪರಿಸ್ಥಿತಿಗೆ ಅಲೆಮಾರಿಗಳು ಸಿಲುಕಿದ್ದು, ಈ ಕುಟುಂಬಗಳಿಗೆ ನೆರವಾಗಲು ಮುಂದಾಗಿರುವ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ರಂಗೇಗೌಡ ಅವರಿಗೆ ಸ್ನೇಹಿತರು ಕೈ ಜೋಡಿಸಿದ್ದಾರೆ.
ಪಡಿತರ ಕಿಟ್: ಅಕ್ಕಿ 10 ಕೆಜಿ ಜತೆಗೆ 1/2 ಕೆಜಿ ಸಕ್ಕರೆ, 1 ಕೆಜಿ ಉಪ್ಪು, 1/2 ಕೆಜಿ ಎಣ್ಣೆ, 1 ಕೆಜಿ ಬೇಳೆ, 1ಕೆಜಿ ಈರುಳ್ಳಿ, 1/4 ಕೆಜಿ ಬೆಳ್ಳುಳ್ಳಿ, ಮಸಾಲೆಪುಡಿ 1 ಪ್ಯಾಕೆಟ್, ಖಾರದಪುಡಿ 1 ಪ್ಯಾಕೇಟ್, ಮೈಸೋಪು 2, ಬಟ್ಟೆಸೋಪು 1, ಟೂಥ್‌ಪೇಸ್ಟ್ , ಟೂಥ್‌ಬ್ರಶ್, ಟೀ ಪುಡಿ ಸೇರಿ 15 ಪದಾರ್ಥಗಳ ಪಡಿತರ ಕಿಟ್ ಅನ್ನು ಅಲೆಮಾರಿ ಕುಟುಂಬಗಳ ಮನೆಬಾಗಿಲಿಗೆ ತಲುಪಿಸಲು ಸಮಾನ ಮನಸ್ಕರ ತಂಡ ಮುಂದಾಗಿದೆ.
ಜಿಲ್ಲಾಕೇಂದ್ರದಿಂದ ಕೂಗಳತೆ ದೂರದಲ್ಲಿರುವ ಅರಕೆರೆ ಗ್ರಾಪಂ ವ್ಯಾಪ್ತಿಯ ಕೇಂದ್ರೀಯ ವಿದ್ಯಾಲಯದ ಪಕ್ಕದಲ್ಲಿ ವಾಸವಿರುವ ಅಲೆಮಾರಿ ಹಕ್ಕಿಪಿಕ್ಕಿ ಸಮುದಾಯದ 30 ರಿಂದ 35 ಕುಟುಂಬಗಳು, ಗುಬ್ಬಿ ಪಟ್ಟಣ ಪಂಚಾಯಿತಿಯ ಬಿಳೇಪಾಳ್ಯ, 19ನೇ ವಾರ್ಡ್‌ನಲ್ಲಿ ಸುಮಾರು 25 ವರ್ಷಗಳಿಂದ ಜೋಪಡಿ (ಟೆಂಟು)ಗಳಲ್ಲಿ ವಾಸವಾಗಿರುವ ಅಲೆಮಾರಿ ಬುಡ್ಗ ಜಂಗಮ ಸಮುದಾಯದ 20 ರಿಂದ 22 ಕುಟುಂಬಗಳು ಹಾಗೂ ಚಿಕ್ಕನಾಯಕನಹಳ್ಳಿ ತಾಲೂಕು ಹುಳಿಯಾರು ಶಂಕರಾಪುರ ಬಡಾವಣೆ ಮತ್ತು ರಾಮ್ ಗೋಪಾಲ್ ಥಿಯೇಟರ್ ಹಿಂಭಾಗದಲ್ಲಿ ವಾಸವಿರುವ ಅಲೆಮಾರಿ ಹೆಳವ ಸಮುದಾಯದ 30 ರಿಂದ 35 ಕುಟುಂಬಗಳಿಗೆ ನೆರವು ನೀಡಲು ತಮ್ಮ ಸ್ನೇಹಿತರ ಸಹಕಾರದಿಂದ ರಂಗೇಗೌಡ ಸಿದ್ಧರಾಗಿದ್ದು ಅಲೆಮಾರಿ ಸಮುದಾಯದವರಿಗೆ ನೆರವಿನ ಹಸ್ತ ಚಾಚಲು ಮುಂದಾಗುವವರಿಗೆ ಪ್ರೇರಣೆಯಾಗಿದ್ದಾರೆ.
ಕರೊನಾ ಮಹಾಮಾರಿಯು ಅಲೆಮಾರಿ ಸಮುದಾಯಗಳನ್ನು ಬುಡಸಮೇತ ಅಲುಗಾಡಿಸಿಬಿಟ್ಟಿದೆ. ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡು ಬದುಕು ಸಾಗಿಸಲು ಹಳ್ಳಿಗಳಿಗೆ ತೆರಳದಂತಹ ಪರಿಸ್ಥಿತಿ ಇದೆ. ಸರ್ಕಾರ ಬರೀ ಅಕ್ಕಿಕೊಟ್ಟರೆ ನಮ್ಮ ಹೊಟ್ಟೆ ತುಂಬುವುದಿಲ್ಲ. ಆಹಾರ, ದಿನಸಿ ಪದಾರ್ಥಗಳ ಅಗತ್ಯವಿದೆ. ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕರಿಗೆ ಮನವಿ ಮಾಡಿಕೊಂಡಾಗ ಸ್ವಂತ ದುಡ್ಡಿನಲ್ಲಿ ನೆರವು ನೀಡಲು ಮುಂದಾಗಿದ್ದಾರೆ. ಹುಳಿಯಾರು ರಾಜಪ್ಪ ಪ್ರಧಾನಕಾರ್ಯದರ್ಶಿ, ಅಲೆಮಾರಿ ಬುಡಕಟ್ಟು ಮಹಾಸಭಾ ಒಪ್ಪೊತ್ತಿನ ಊಟಕ್ಕೂ ಕಷ್ಟವಿರುವ ಅಲೆಮಾರಿ ಸಮುದಾಯದವರ ಸಂಕಷ್ಟಕ್ಕೆ ಸಮಾನ ಮನಸ್ಕರ ಜತೆಗೂಡಿ ನೆರವಿನ ಹಸ್ತಚಾಚಲಾಗಿದೆ. ಸರ್ಕಾರಕ್ಕೂ ನೆರವಿಗಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಅದು ಬರುವವರೆಗೆ ಆ ಕುಟುಂಬಗಳಿಗೆ ನೆರವಿನ ಪಡಿತರ ಕಿಟ್ ನೀಡಲಾಗುವುದು. ರಂಗೇಗೌಡ ಜಿಲ್ಲಾ ವ್ಯವಸ್ಥಾಪಕ, ಅಂಬೇಡ್ಕರ್ ಅಭಿವೃದ್ಧಿ ನಿಗಮ