

ರಾಯಚೂರು: ಫಸಲ್ ಬಿಮಾ ಯೋಜನೆಯಡಿ ವಿಮೆ ಕಂತು ಪಾವತಿಸಿರುವ ರೈತರ ಬದಲಿಗೆ ಬೇರೆಯವರ ಖಾತೆಗೆ ಪರಿಹಾರದ ಹಣ ಜಮಾ ಮಾಡಿರುವ ಅಕ್ರಮ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ್ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದರು. ಅಕ್ರಮಕ್ಕೆ ಸಂಬಂಧಿಸಿದಂತೆ ಕೇವಲ ರೈತರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಕೃಷಿ, ಕಂದಾಯ ಹಾಗೂ ವಿಮೆ ಕಂಪನಿಗಳ ಅಧಿಕಾರಿಗಳ ವಿರುದ್ಧ ಕ್ರಮಕೈಗೊಂಡಿಲ್ಲ. ಯೋಜನೆಯಿಂದ ರೈತರಿಗೆ ಅನುಕೂಲವಾಗುವ ಬದಲು ವಿಮೆ ಕಂಪನಿಗಳಿಗೆ ಲಾಭವಾಗುವಂತಾಗಿದೆ. ಸಿರವಾರ ತಾಲೂಕಿನ ಮಾಡಗಿರಿ ಗ್ರಾಮದಲ್ಲಿ ಒಂದು ಕೋಟಿ ರೂ. ಹಾಗೂ ಹಳ್ಳಿಹೊಸೂರು ಗ್ರಾಮದ ರೈತರ 54 ಲಕ್ಷ ರೂ. ಪರಿಹಾರ ಬೇರೆಯವರ ಖಾತೆಗೆ ಜಮಾ ಮಾಡಲಾಗಿದೆ ಎಂದು ದೂರಿದರು.
ರೈತರ ಪಹಣಿ, ಜಮೀನಿನಲ್ಲಿ ಬೆಳೆದ ಬೆಳೆಯ ಮಾಹಿತಿ ಪಡೆಯುವ ವಿಮೆ ಕಂಪನಿ ನಷ್ಟ ಪರಿಹಾರವನ್ನು ಸಂಬಂಧವೇ ಇಲ್ಲದವರ ಖಾತೆಗೆ ಜಮಾ ಮಾಡಿರುವುದರ ಹಿಂದೆ ಬಹುದೊಡ್ಡ ಅಕ್ರಮವಿದೆ. ರಾಜ್ಯ ಸರ್ಕಾರ ಸಮಗ್ರ ತನಿಖೆಗೆ ವಿಶೇಷ ತಂಡ ರಚಿಸಬೇಕು. ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಆರ್.ದೇವಿಕಾ ಅನೇಕ ಅಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ಚೆಕ್‌ಡ್ಯಾಂ ನಿರ್ಮಾಣ, ಯಂತ್ರೋಪಕರಣ ವಿತರಣೆ ಸೇರಿ ಅನೇಕ ಯೋಜನೆಗಳಲ್ಲಿ ಭ್ರಷ್ಟಾಚಾರ ಎಸಗಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಮಾನ್ವಿ ತಾಲೂಕಿನಲ್ಲಿ ಕಳೆದ ವರ್ಷ ಮಾರ್ಚ್‌ನಲ್ಲಿ ಜೋಳ ಮಾರಾಟ ಮಾಡಿರುವ ರೈತರಿಗೆ 10 ಕೋಟಿ ರೂಪಾಯಿಯನ್ನು ಸರ್ಕಾರ ಬಾಕಿ ಉಳಿಸಿಕೊಂಡಿದೆ. ಕೂಡಲೇಬಾಕಿ ಹಣ ಪಾವತಿಗೆ ಮುಂದಾಗಬೇಕು. ಅಕ್ಕಿ ಗಿರಣಿ ಮಾಲೀಕರು ಎಪಿಎಂಸಿ ಕಾಯ್ದೆ ರದ್ದುಗೊಳಿಸಲು ಆಗ್ರಹಿಸಿದ್ದಾರೆ. ಕಾಯ್ದೆಗಳು ಕಿರುಕುಳ ನೀಡಲು ರೂಪಿಸಲಾಗುವುದಿಲ್ಲ.
ರೈತರು, ವ್ಯಾಪಾರಸ್ಥರೊಂದಿಗೆ ಚರ್ಚಿಸಿ ಸೂಕ್ತ ಕಾಯ್ದೆ ರೂಪಿಸಬೇಕು. ಎ್ಸಿಐ ಗೋದಾಮುಗಳಲ್ಲಿ ಹುಳುಗಳ ಹಾವಳಿ ಹೆಚ್ಚಳವಾಗಲು ಅಧಿಕಾರಿಗಳ ಬೇಜವಾಬ್ದಾರಿತನ ಕಾರಣವಾಗಿದೆ ಎಂದು ಚಾಮರಸ ಮಾಲಿಪಾಟೀಲ್ ಹೇಳಿದರು. ಜಿಲ್ಲಾಧ್ಯಕ್ಷ ಪ್ರಭಾಕರ ಪಾಟೀಲ್, ಮಲ್ಲಣ್ಣ ದಿನ್ನಿ, ಬೂದೆಯ್ಯ ಸ್ವಾಮಿ, ದೇವರಾಜ ನಾಯಕ, ಬ್ರಹ್ಮಯ್ಯ ಆಚಾರಿ ಉಪಸ್ಥಿತರಿದ್ದರು.