ಪುರಸಭೆಗೆ ಸಿಗದ ಹೊಸ ಕಟ್ಟಡ ಭಾಗ್ಯ

mkg
Published on

ಜಗದೀಶ್ ಟಿ.ಎನ್. ಚನ್ನಗಿರಿ
ಪುರಸಭೆಯ ಹೊಸ ಕಟ್ಟಡ ಉದ್ಘಾಟನೆಗೊಂಡರೂ ಮೂಲಸೌಕರ್ಯ ಕೊರತೆಯಿಂದ ಹಳೆಯ ಕಟ್ಟಡದಲ್ಲೇ ಕಚೇರಿ ಕಾರ್ಯಗಳು ನಡೆಯುತ್ತಿವೆ.

ಚನ್ನಗಿರಿ ಪಟ್ಟಣ 23 ವಾರ್ಡ್‌ಗಳುಳ್ಳ, ಸುಮಾರು 28 ಸಾವಿರ ಜನಸಂಖ್ಯೆ ಹೊಂದಿರುವ ದಾವಣಗೆರೆ ಜಿಲ್ಲೆಯ 2ನೇ ದೊಡ್ಡ ತಾಲೂಕು ಕೇಂದ್ರ. ಪಟ್ಟಣದ ಜನಸಂಖ್ಯೆ ಹೆಚ್ಚಳವಾದಂತೆ ಸರ್ಕಾರ ಚನ್ನಗಿರಿಯನ್ನು ಪಪಂನಿಂದ ಪುರಸಭೆಯಾಗಿ ಮೇಲ್ದರ್ಜೆಗೇರಿಸಿತು.

ಆಡಳಿತ ಸುಧಾರಣೆ, ಕಾರ್ಯಭಾರಕ್ಕೆ ತಕ್ಕಂತೆ ಸಿಬ್ಬಂದಿ ಹೆಚ್ಚಿಸಿತು. ಆದರೆ, ಪುರಸಭೆ ಕಾರ್ಯಗಳು 35 ವರ್ಷಗಳಿಂದ ಆರೋಗ್ಯ ಇಲಾಖೆಯ ಬಾಡಿಗೆ ಕಟ್ಟಡದಲ್ಲೇ ನಡೆಯುತ್ತಿವೆ.

ಪುರಸಭೆ ಸದಸ್ಯರು ಹೊಸ ಕಟ್ಟಡ ನಿರ್ಮಿಸಲು ಸರ್ಕಾರದ ಮೇಲೆ ಒತ್ತಡ ತಂದಿದ್ದರಿಂದ ಬಸ್ ನಿಲ್ದಾಣದ ಬಳಿಯ ಪುರಸಭೆಯ ನಿವೇಶನದಲ್ಲಿ ಅವಕಾಶ ಕಲ್ಪಿಸಿ, ನಗರೋತ್ಥಾನ ಯೋಜನೆಯಡಿ 2019ರಲ್ಲಿ 5 ಕೋಟಿ ರೂ. ನೀಡಿ, 2 ವರ್ಷ ಗಡುವು ನೀಡಿತ್ತು. ಆದರೆ, ಕಾಮಗಾರಿ ಅವಧಿ ಮುಗಿದು ಉದ್ಘಾಟನೆಗೊಂಡರೂ ಸೌಕರ್ಯ ಕೊರತೆಯಿಂದ ಕಟ್ಟಡ ಬಳಸಲು ಆಗದಂತ ಪರಿಸ್ಥಿತಿ ಇದೆ.

4ನೇ ಅಂತಸ್ತಿನ ಕಾಮಗಾರಿ ಅವಧಿ ಮುಗಿದು ನಾಲ್ಕು ವರ್ಷಗಳಾದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಜತೆಗೆ ಸಭಾಂಗಣ, ಪೀಠೋಪಕರಣ ಹಾಗೂ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ.

ಈಗಿರುವ ಪುರಸಭೆ ಕಚೇರಿಯು ಆರೋಗ್ಯ ಇಲಾಖೆ ಕಟ್ಟಡದಲ್ಲಿ ನಡೆಯುತ್ತಿದ್ದು, ಅಲ್ಲಿ ವೈದ್ಯರು, ಸಿಬ್ಬಂದಿಗಾಗಿ ವಸತಿಗೃಹ ನಿರ್ಮಿಸಲು ಸರ್ಕಾರ ಆದೇಶಿಸಿದ್ದು, ಪುರಸಭೆ ಬಿಟ್ಟು ಕೊಡಬೇಕೆಂಬ ಸೂಚಿಸಿದೆ. ಆದರೆ, ಇದು ಕೈಗೂಡುತ್ತಿಲ್ಲ.

ಟೆಂಡರ್ ಪಡೆದ ಗುತ್ತಿಗೆದಾರರಿಗೆ ಒಂದು ಕೋಟಿ ರೂ. ಬಾಕಿ ನೀಡಬೇಕಿದ್ದು, ಕಾಮಗಾರಿ ನಿಂತಿದೆ. ಅಲ್ಲದೆ, ಹೊಸ ಸರ್ಕಾರ ಯಾವುದೇ ಕಾಮಗಾರಿ ಮಾಡದಂತೆ ಆದೇಶಿಸಿರುವ ಕಾರಣ ಹೊಸ ಟೆಂಡರ್ ಕರೆಯಬೇಕಿದೆ. ಆದೇಶಕ್ಕಾಗಿ ಕಾಯುತ್ತ ಇದ್ದೇವೆ. ಬಂದ ತಕ್ಷಣ ಕೆಲಸ ಮುಗಿಸಿ ಪುರಸಭೆಗೆ ನೀಡಲಾಗುತ್ತದೆ.
-ಎಇಇ ರವಿಕುಮಾರ್, ಲೋಕೋಪಯೋಗಿ ಇಲಾಖೆ.


ಆರೋಗ್ಯ ಇಲಾಖೆಯ ಕಟ್ಟಡದಲ್ಲಿ ಕಚೇರಿ ನಡೆಸಲಾಗುತ್ತಿದೆ. ಸ್ವಂತ ಕಟ್ಟಡದ ಕಾಮಗಾರಿ ಮುಗಿದ ತಕ್ಷಣ ಖಾಲಿ ಮಾಡುತ್ತೇವೆ. ಈಗಾಗಲೇ ಆರೋಗ್ಯ ಇಲಾಖೆಯವರು ವಸತಿಗೃಹ ನಿರ್ಮಿಸಲು ಖಾಲಿ ಮಾಡುವಂತೆ ಅರು ತಿಂಗಳಿಂದ ಒತ್ತಡ ಹಾಕುತ್ತಿದ್ದಾರೆ.
- ಕೆ. ಪರಮೇಶ್, ಪುರಸಭೆ ಮುಖ್ಯಾಧಿಕಾರಿ.

ಇಪ್ಪತ್ತೈದು ವರ್ಷಗಳ ಹಿಂದೆ ಸದಸ್ಯರಾಗಿದ್ದಾಗ ಬಾಡಿಗೆ ಕಟ್ಟಡದಲ್ಲೇ ಆಡಳಿತ ನಡೆಸುತ್ತಿದ್ದೆವು. ಇಂದು ಸಹ ಅಲ್ಲೇ ನಡೆಯುತ್ತಿದೆ. ಪುರಸಭೆಯ ಸ್ವಂತ ಕಟ್ಟಡದ ಮೊದಲ, ಎರಡನೇ ಅಂತಸ್ತಿನ ಕಾಮಗಾರಿ ಮುಗಿದಿದ್ದು, ಅಲ್ಲಿಗೆ ಸ್ಥಳಾಂತರ ಆಗಬಹುದು.
- ನಟರಾಜ್, ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ.

ಆರೋಗ್ಯ ಇಲಾಖೆ ವೈದ್ಯರು, ಸಿಬ್ಬಂದಿಗಾಗಿ 8 ಮನೆ ನಿರ್ಮಿಸಲು 2021ರಲ್ಲಿ 2 ಕೋಟಿ ರೂ. ಅನುದಾನ ಮಂಜೂರಾಗಿ ಟೆಂಡರ್ ಕರೆಯಲಾಗಿತ್ತು. ಈಗಿನ ಪುರಸಭೆಯವರು ಕಟ್ಟಡ ಖಾಲಿ ಮಾಡದ ಕಾರಣ ಕಾಮಗಾರಿ ನಿಂತಿದೆ. ಸಿಬ್ಬಂದಿಯವರು ಬಾಡಿಗೆ ಮನೆಯಲ್ಲಿದ್ದಾರೆ.
-ಡಾ. ಚಂದ್ರಪ್ಪ, ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net