

ಮುಂಡರಗಿ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸ್ಥಳೀಯ ಪುರಸಭೆ ಪೌರನೌಕರರು ಪುರಸಭೆ ಆವರಣದಲ್ಲಿ ಮಂಗಳವಾರ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಂಡರು. ಪಟ್ಟಣದಲ್ಲಿ ಕಸ ಸಂಗ್ರಹ, ವಿಲೇವಾರಿ, ಸ್ವಚ್ಛತೆ, ಒಳಚರಂಡಿ ನಿರ್ವಹಣೆ ಹಾಗೂ ಕಚೇರಿ ಕೆಲಸವನ್ನು ಸ್ಥಗಿತಗೊಳಿಸಿ ಮುಷ್ಕರವನ್ನು ಪ್ರಾರಂಭಿಸಿದರು. ರಾಜ್ಯದ ಎಲ್ಲ ನಗರ ಸ್ಥಳೀಯ ಸಂಸ್ಥೆ ನೌಕರರನ್ನು ರಾಜ್ಯ ಸರ್ಕಾರಿ ನೌಕರರೆಂದು ಪರಿಗಣಿಸಬೇಕು ಎಂಬುದು ಸೇರಿದಂತೆ ಮತ್ತಿತರ ಬೇಡಿಕೆಗಳನ್ನು ಈಡೇರಿಸಬೇಕೆಂದು ಮುಷ್ಕರ ನಡೆಸಿದರು. ಪುರಸಭೆ ಪೌರ ನೌಕರರ ಸಂಘದ ಅಧ್ಯಕ್ಷ ಮೈಲಪ್ಪ ದೊಡ್ಡಮನಿ, ಅಶೋಕ ಪೂಜಾರ, ಎಸ್.ಸಿ. ಕಾಳೆ, ಎಂ.ಎಸ್. ಮ್ಯಾಗೇರಿ, ರವಿ ಕುಂಬಾರ, ಮುದಕಪ್ಪ ಬಚೇನಹಳ್ಳಿ, ದಾನೇಶ್ವರಿ ಹಿರೇಮಠ, ಶಾರದಾ ಕೆ.ವಿ, ಗಾಯತ್ರಿ ಬಡಿಗೆರ, ಉಮಾ ಯಟ್ಟಿ, ಹಬೀಬ್, ಎಂ.ಡಿ.ದೊಡ್ಡಮನಿ, ದೇವರಾಜ ಗೋಡಿ, ಮಂಜುಳಾ ಹಾಲಿನವರ, ಇತರರಿದ್ದರು.