

ಬೆಂಗಳೂರು: ಪ್ರಮುಖ ಸಾಫ್ಟ್ವೇರ್ ಕಂಪನಿಗಳು ಕಾರ್ಯನಿರ್ವಹಿಸುತ್ತಿರುವ ಬೆಂಗಳೂರು, ಹೈದರಾಬಾದ್, ಚೆನ್ನೈ, ದೆಹಲಿ, ಅಹಮದಾಬಾದ್, ಕೊಲ್ಕತ್ತ, ಮುಂಬೈ ಮತ್ತು ಕೊಚ್ಚಿಯಲ್ಲಿ ಜುಲೈ- ಸೆಪ್ಟೆಂಬರ್ ಅವಧಿಯಲ್ಲಿ ಕಚೇರಿ ಸ್ಥಳ ಗುತ್ತಿಗೆ ನೀಡುವ ಪ್ರಮಾಣ ಒಟ್ಟು ಶೇ.2.5 ಕುಸಿತವಾಗಿದೆ.
ಕಚೇರಿ ಸ್ಥಳಗಳಿಗೆ ಬೇಡಿಕೆ ಇಲ್ಲದಿರುವ ಕಾರಣ ದೇಶದ ಪ್ರಮುಖ ಐಟಿ-ಬಿಟಿ ನಗರವಾಗಿರುವ ಬೆಂಗಳೂರಿನಲ್ಲಿ ಶೇ.40 ಇಳಿಕೆಯಾಗಿದೆ. ದೇಶದ 9 ನಗರಗಳಲ್ಲಿ 2024-25ರ ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ಒಟ್ಟು ಕಚೇರಿ ಸ್ಥಳ ಗುತ್ತಿಗೆ 20.4 ಮಿಲಿಯನ್ ಚ.ಅಡಿಗಳಿಷ್ಟಿತ್ತು. ಪ್ರಸ್ತಕ ವರ್ಷದ ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ಶೇ.2.5 ಇಳಿಕೆಯಾಗಿ 19.9 ಚ.ಅಡಿಗೆ ತಲುಪಿದೆ. ಇದಕ್ಕೆ ಕಾರಣ ದಕ್ಷಿಣ ಭಾರತದಲ್ಲಿ ಬೇಡಿಕೆ ಇಲ್ಲದಿರುವುದು ಎಂದು ರಿಯಲ್ ಎಸ್ಟೇಟ್ ಸಲಹೆಗಾರ ಸಂಸ್ಥೆಯಾದ ಸಿಬಿಆರ್‌ಇ ಮಾಹಿತಿ ನೀಡಿದೆ.
ರಾಜಧಾನಿಯಲ್ಲಿ ಕಚೇರಿ ಸ್ಥಳಗಳ ಒಟ್ಟು ಗುತ್ತಿಗೆ 4.3 ಮಿಲಿಯನ್ ಚ.ಅಡಿಗೆ ಇಳಿದಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ 7.2 ಮಿಲಿಯನ್ ಚದರ ಅಡಿಗಳಿಷ್ಟಿತ್ತು. ಹೈದರಾಬಾದ್‌ನಲ್ಲಿ 2.6 ಮಿಲಿಯನ್ ಚ.ಅಡಿಗಳಿಂದ 2.2 ಮಿಲಿಯನ್ ಚ.ಅಡಿಗೆ ಗುತ್ತಿಗೆ ಚಟುವಟಿಕೆಗಳು ಕುಸಿತವಾಗಿದೆ. ಚೆನ್ನೈನಲ್ಲಿಯೂ ಒಟ್ಟು ಕಚೇರಿಗೆ 2.4 ಮಿಲಿಯನ್ ಚ. ಅಡಿಗಳಿಂದ 1.5 ಮಿಲಿಯನ್ ಚ.ಅಡಿಗೆ ಇಳಿದಿದೆ. ಆದರೆ, ದೆಹಲಿಯಲ್ಲಿ ಕಚೇರಿ ಸ್ಥಳ ಗುತ್ತಿಗೆ ನೀಡುವ ಪ್ರಮಾಣ 2.4 ಮಿಲಿಯನ್ ಚ. ಅಡಿಗಳಿಂದ 3.8 ಚ.ಅಡಿಗೆ ಹೆಚ್ಚಳವಾಗಿದೆ. ಮುಂಬೈನಲ್ಲಿ 2.9 ಮಿಲಿಯನ್ ಚ.ಅಡಿಗಳಿಂದ 4 ಮಿಲಿಯನ್ ಚ.ಅಡಿಗೆ, ಪುಣೆಯಲ್ಲಿ 1.9 ಮಿಲಿಯನ್ ಚ.ಅಡಿಗಳಿಂದ 3.2 ಮಿಲಿಯನ್ ಚ.ಅಡಿಗೆ ಏರಿದೆ.
ಕೊಲ್ಕತ್ತಾದಲ್ಲಿ ಕಚೇರಿ ಸ್ಥಳ ಗುತ್ತಿಗೆ ನೀಡುವ ಪ್ರಮಾಣ ಸ್ಥಿರವಾಗಿದೆ. ಆದರೆ, ಅಹಮದಾಬಾದ್‌ನಲ್ಲಿ 0.3 ಮಿಲಿಯನ್ ಚ. ಅಡಿಯಿಂದ 0.1 ಚ. ಅಡಿಗೆ ಕುಸಿದಿದೆ. ಕೊಚ್ಚಿಯಲ್ಲಿ ಇದರ ಪ್ರಮಾಣ ಹೆಚ್ಚಳವಾಗಿರುವುದು ಗಮನಾರ್ಹ. ಕೋವಿಡ್ ಸಂದರ್ಭದಲ್ಲಿ ತೀವ್ರವಾಗಿ ಕುಸಿತವಾಗಿದ್ದ ಭಾರತ ಕಚೇರಿ ಮಾರುಕಟ್ಟೆಯು 2022ರಿಂದ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಆದಗ್ಯೂ, ಜಾಗತಿಕ ಸಾಮರ್ಥ್ಯ ಕೇಂದ್ರ ಸ್ಥಾಪಿಸಲು ಬಯಸುವ ವಿದೇಶಿ ಕಂಪನಿಗಳಿಂದ ಕೆಲಸದ ಸ್ಥಳಗಳಿಗೆ ಹೆಚ್ಚಿನ ಬೇಡಿಕೆ ಬರುತ್ತಿದೆ ಎಂದು ಸಿಬಿಆರ್‌ಇ ತಿಳಿಸಿದೆ.