

ಜಗಳೂರು: ವೇತನ ಹೆಚ್ಚಳ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಜಗಳೂರಿನಲ್ಲಿ ಶನಿವಾರ ತಾಲೂಕು ಕಚೇರಿ ಮುಂಭಾಗದಲ್ಲಿ ತಾಲೂಕು ಘಟಕದ ಬಿಸಿಯೂಟ ತಯಾರಕರ ಫೆಡರೇಷನ್ ಪ್ರತಿಭಟನೆ ನಡೆಸಿತು.
ಕಳೆದ 23 ವರ್ಷಗಳಿಂದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಧ್ಯಾಹ್ನ ಉಪಾಹಾರ ಯೋಜನೆಯಡಿ ದುಡಿಯುತ್ತಿರುವ ಬಿಸಿಯೂಟ ತಯಾರಕ ಮಹಿಳೆಯರಿಗೆ ಅತ್ಯಂತ ಕಡಿಮೆ ಗೌರವಧನ ನೀಡಲಾಗುತ್ತಿದೆ. ಮಾಸಿಕವಾಗಿ ಮುಖ್ಯ ಅಡುಗೆಯವರಿಗೆ 3700 ಹಾಗೂ ಸಹಾಯಕ ಅಡುಗೆಯವರಿಗೆ 3600 ರೂ. ಸಿಗುತ್ತಿದೆ. ಇದರಿಂದ ಅವರು ಜೀವನ ನಡೆಸುವುದು ಕಷ್ಟಕರ. ಹಾಗಾಗಿ ಬಜೆಟ್ನಲ್ಲಿ ವೇತನ ಹೆಚ್ಚಳ ಮಾಡುವುದು, ಮರಣ ಪರಿಹಾರ ಜಾರಿಗೊಳಿಸುವುದು, ನಿವೃತ್ತರಾದವರಿಗೆ ಇಡುಗಂಟು ಹಣವನ್ನು ಕನಿಷ್ಠ 2 ಲಕ್ಷ ರೂಪಾಯಿಗೆ ಏರಿಸುವುದು ಸೇರಿ ಇತರೆ ಬೇಡಿಕೆಗಳನ್ನು ಜಾರಿಗೊಳಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಹೋರಾಟಗಾರ ಮಹಮದ್ ಭಾಷಾ ಮಾತನಾಡಿ, ಬೇರೆಡೆ ಕೂಲಿ ಹೋದರೆ ದಿನಕ್ಕೆ 500 ರೂ. ದುಡಿಯುತ್ತಾರೆ. ಆದರೆ ಇವರಿಗೆ ಕೇವಲ 125 ರೂ. ಕೂಲಿ ಬೀಳುತ್ತದೆ. ಸರ್ಕಾರಿ ನೌಕರರಿಗೆ ಲಕ್ಷಾಂತರ ರೂ. ವೇತನವಿದೆ. ಆದ್ದರಿಂದ ಇವರಿಗೆ ಕನಿಷ್ಠ 15 ಸಾವಿರ ಗೌರವಧನ ನೀಡಿದರೆ ಅನುಕೂಲವಾಗುತ್ತದೆ. ಕಾಂಗ್ರೆಸ್ನ ಚುನಾವಣೆ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ ಸಿಎಂ ಅವರು ಇದನ್ನು ಜಾರಿಗೊಳಿಸಬೇಕು ಎಂದರು.
ಫೆಡರೇಷನ್ ತಾಲೂಕಾಧ್ಯಕ್ಷೆ ಚನ್ನಮ್ಮ ಮಾತನಾಡಿ, ರಾಜ್ಯದಲ್ಲಿ 15 ಕ್ಕೂ ಹೆಚ್ಚು ಜನ ಬಿಸಿಯೂಟ ತಯಾರಕರು ಶಾಲೆಯಲ್ಲಿ ಅಡುಗೆ ತಯಾರಿಸುವಾಗ ಕುಕ್ಕರ್ ಸ್ಪೋಟಗೊಂಡು ಮೃತಪಟ್ಟಿದ್ದಾರೆ. ಕುಟುಂಬದವರಿಗೆ ಯಾವುದೇ ಪರಿಹಾರ ಕೊಟ್ಟಿಲ್ಲ. ಕೂಡಲೇ ಮರಣ ಪರಿಹಾರವಾಗಿ 10 ಲಕ್ಷ ರೂಪಾಯಿ, ಆಸ್ಪತ್ರೆ ವೆಚ್ಚಕ್ಕೆ 50 ಸಾವಿರ ರೂ. ಜಾರಿಗೊಳಿಸಬೇಕು ಎಂದರು.
ನಂತರ ತಹಸೀಲ್ದಾರ್ ಸೈಯದ್ ಕಲೀಂಉಲ್ಲಾ ಅವರಿಗೆ ಮನವಿ ಸಲ್ಲಿಸಲಾಯಿತು.
ಫೆಡರೇಷನ್ ಕಾರ್ಯದರ್ಶಿ ಭಾರತಿ, ಖಜಾಂಚಿ ಮೀನಾಕ್ಷಮ್ಮ, ಕಟ್ಟಡ ಕಾರ್ವಿುಕ ಸಂಘದ ಮುಖಂಡರಾದ ವೀರಣ್ಣ, ತಿಪ್ಪೇಸ್ವಾಮಿ, ಪದಾಧಿಕಾರಿಗಳಾದ ಗೌರಮ್ಮ, ಲಲಿತಮ್ಮ, ವಸಂತಮ್ಮ, ಹುಲಿಗೆಮ್ಮ, ಆಜರಾಬಿ, ಅನಿತಾ, ಶಾರದಮ್ಮ ಸೇರಿ ಮತ್ತಿತರರಿದ್ದರು.