

ಹೂವಿನಹಡಗಲಿ: ವಿಜಯನಗರ ಜಿಲ್ಲೆಯಲ್ಲಿ ಅಂಗವಿಕಲರ ಕಲ್ಯಾಣಾಧಿಕಾರಿ ಕಚೇರಿ ಪ್ರಾರಂಭಿಸುವಂತೆ ಒತ್ತಾಯಿಸಿ ತಾಲೂಕು ಅಂಗವಿಕಲರ ಸಂಘ ಮತ್ತು ಇತರ ಸಂಘಟನೆಗಳು ಸೋಮವಾರ ತಹಸೀಲ್ದಾರ್ ಕೆ.ಶರಣಮ್ಮಗೆ ಮನವಿ ಸಲ್ಲಿಸಿದವು.
ತಾಲೂಕು ಅಂಗವಿಕಲರ ಮತ್ತು ಪಾಲಕರ ಒಕ್ಕೂಟದ ಅಧ್ಯಕ್ಷ ಎಸ್.ಚಂದ್ರಪ್ಪ ತಳಕಳ್ ಮಾತನಾಡಿ, ವಿಜಯನಗರ ಜಿಲ್ಲೆಯಾಗಿ ಎರಡು ವರ್ಷವಾದರೂ ಅಂಗವಿಕಲರ ಕಲ್ಯಾಣಾಧಿಕಾರಿ ಕಚೇರಿ ಸ್ಥಾಪಿಸಿಲ್ಲ.
ಇದರಿಂದ ತಾಲೂಕಿನ ಅಂಗವಿಕಲರು ದೂರದ ಬಳ್ಳಾರಿ ಜಿಲ್ಲಾ ಕಚೇರಿಗೆ ತೆರಳುವುದು ಅನಿವಾರ್ಯ ಮತ್ತು ಕಷ್ಟಕರವಾಗಿದೆ. ಇದಲ್ಲದೆ ಸರ್ಕಾರದ ಅಗತ್ಯ ಸೌಲಭ್ಯಗಳನ್ನು ಪಡೆಯಲು ಮತ್ತು ಇತರ ಮಾಹಿತಿ ತಿಳಿದುಕೊಳ್ಳಲು ಕಚೇರಿಗೆ ತೆರಳಬೇಕಾಗಿರುತ್ತದೆ.
ಹೀಗಾಗಿ ಜಿಲ್ಲಾ ಕೇಂದ್ರ ಹೊಸಪೇಟೆಯಲ್ಲಿ ಅಂಗವಿಕಲರ ಕಲ್ಯಾಣಾಧಿಕಾರಿ ಕಚೇರಿ ಸ್ಥಾಪಿಸಿ ಅಂಗವಿಕಲರಿಗೆ ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಿದರು.
ಒಕ್ಕೂಟದ ನಗರ ಘಟಕದ ಅಧ್ಯಕ್ಷ ಎನ್.ಎಂ.ಕೊಟ್ರೇಶ್, ಉಪಾಧ್ಯಕ್ಷ ಜೇಡರ ನಿಂಗಪ್ಪ, ಕಾರ್ಯದರ್ಶಿಗಳಾದ ವಿಜಯಕುಮಾರ್, ವಿಕಲಚೇತನ ಅಧಿಕಾರಿ ಎಂ.ಮಂಜುನಾಥ ಇತರರಿದ್ದರು.