

ಮನೋಹರ್ ಬಳಂಜ ಬೆಳ್ತಂಗಡಿ
ಕೊಯ್ಯೂರು ಗ್ರಾಮದ ಗ್ರಾಮಾಧಿಕಾರಿ ಕಟ್ಟಡಕ್ಕೆ ಕಳೆದ ಹತ್ತಾರು ವರ್ಷಗಳಿಂದ ಅನುದಾನ ತರಲು ನಡೆಸುತ್ತಿರುವ ಪ್ರಯತ್ನ ವಿಫಲವಾಗಿದೆ. ಪರಿಣಾಮ ಕಟ್ಟಡದ ಅವಶೇಷಗಳು ಗ್ರಾಮಾಧಿಕಾರಿ ಕಚೇರಿ ಸಿಬ್ಬಂದಿ ಹಾಗೂ ಕಚೇರಿಯ ಅಗತ್ಯ ಕೆಲಸಕ್ಕೆ ಭೇಟಿ ನೀಡುವ ಗ್ರಾಮದ ಜನರ ತಲೆಮೇಲೆ ಬೀಳುವ ಭಯ ಉಂಟಾಗುತ್ತಿದೆ. ತುರ್ತಾಗಿ ಸ್ಥಳಾಂತರ ಮಾಡದೇ ಇದ್ದರೆ ಕಟ್ಟಡವೇ ಕುಸಿದು ಬಿದ್ದು ಗಂಭೀರ ಅನಾಹುತ ಆಗುವ ಎಲ್ಲ ಸಾಧ್ಯತೆಗಳಿವೆ. ಈಗಿನ ಹಳೆಯ ಕಟ್ಟಡ ಸಂಪೂರ್ಣವಾಗಿ ಶಿಥಿಲವಾಗಿ ಸಿಬ್ಬಂದಿ ಕೆಲಸ ಕಾರ್ಯಗಳನ್ನು ನಡೆಸಲು ಯೋಗ್ಯವಲ್ಲದ ಸ್ಥಿತಿಯಲ್ಲಿದೆ.
ದೊರೆಯದ ಅನುದಾನ : ಪಾಚಿ ಹಿಡಿದ ಗೋಡೆಗಳು ಕುಸಿಯಲು ದಿನಗಣನೆ ಮಾಡುತ್ತಿವೆ. ಇನ್ನೊಂದು ಮಳೆಗಾಲದ ತನಕ ಕಟ್ಟಡ ಉಳಿಯುವುದು ಅನುಮಾನವಾಗಿದೆ. ಮೇಲ್ಛಾವಣಿಯ ಮರದ ಪಕ್ಕಾಸು, ರೀಪು, ಹೆಂಚುಗಳು ಗೆದ್ದಲು ಹಿಡಿದು ಜಾರಿ ನೇತಾಡಿಕೊಂಡಿವೆ. ಮುಖ್ಯದ್ವಾರ, ಕಿಟಕಿ, ಬಾಗಿಲು ಮಳೆನೀರು ಬಿದ್ದು ಸಂಪೂರ್ಣವಾಗಿ ಶಿಥಿಲವಾಗಿವೆ. ವಷರ್ಗಳ ಹಿಂದೆ ಕಟ್ಟಡಕ್ಕೆ ಸಿಡಿಲು ಬಡಿದಿದೆ ಎಂದು ಸ್ಥಳೀಯ ಗ್ರಾಮಸ್ಥರು ಹೇಳುತ್ತಾರೆ. ವಿದ್ಯುತ್ ವೈರಿಂಗ್ ಕಿತ್ತು ಹೋಗಿದೆ. ಗೋಡೆಯ ನಾಲ್ಕು ಮೂಲೆಗಳಲ್ಲಿ ಬಿರುಕು ಬಿಟ್ಟಿದೆ. ಗೋಡೆಗೆ ನೀರು ಬಸಿದು ಪಾಚಿ ಹಿಡಿದು ಇನ್ನೇನು ಬೀಳುವ ಪರಿಸ್ಥಿಯಲ್ಲಿವೆ. ಅದರೊಳಗೆ ಇರುವ ಪಕ್ಕಾಸಿಗೆ ಎಂದೋ ಗೆದ್ದಲು ಹಿಡಿದಿದೆ. ಈಗ ಸೀಲಿಂಗ್ ವ್ಯವಸ್ಥೆ ಇಲ್ಲವಾಗಿದೆ.
ಛಾವಣಿ ಕಳಚಿಕೊಂಡು ಅಧಿಕಾರಿಗಳು, ಸಿಬ್ಬಂದಿ ಹಾಗೂ ಕಚೇರಿ ಕೆಲಸಕ್ಕೆ ಭೇಟಿ ನೀಡುವ ಗ್ರಾಮದ ಜನರ ತಲೆ ಮೇಲೆ ಬೀಳುವ ಸಾಧ್ಯತೆಯಿದೆ ಎಂಬ ಭಯ ಆಗುತ್ತದೆ. ಕಳೆದ ಹತ್ತಾರು ವರ್ಷಗಳಿಂದಲೂ ಈ ಶಿಥಿಲವಾದ ಕಟ್ಟಡದಲ್ಲಿ ಕಂದಾಯ ಇಲಾಖೆಯ ಗ್ರಾಮಾಧಿಕಾರಿ ಹಾಗೂ ಸಿಬ್ಬಂದಿ ಕರ್ತವ್ಯ ಕಾರ್ಯನಿರ್ವಹಿಸುತ್ತಿದ್ದಾರೆ.
ಕಡತಗಳು ಕಬ್ಬಿಣದ ಕಪಾಟುಗಳಲ್ಲಿ ಭದ್ರವಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಅಧಿಕಾರಿಗಳಿಗೆ, ಸಿಬ್ಬಂದಿ ಹಾಗೂ ಜನರಿಗೆ ಕುಳಿತುಕೊಳ್ಳಲು ಸರಿಯಾದ ಆಸನದ ವ್ಯವಸ್ಥೆ ಇಲ್ಲ. ಅನುಪಯುಕ್ತ ದಾಖಲೆ, ಪತ್ರಗಳ ಬೇರೆ, ಬೇರೆ ಕಟ್ಟುಗಳನ್ನು ನೆಲದ ಮೇಲೆ ಇಡಲಾಗಿದೆ. ಅದು ಗೆದ್ದಲು ಹಿಡಿದು ದಾಖಲೆ ಪತ್ರಗಳು ನೆಲಕಚ್ಚಿಕೊಂಡು ಮಣ್ಣಿನಲ್ಲಿ ಗಟ್ಟಿಯಾಗಿವೆ.
ಕೊಯ್ಯೂರು ಗ್ರಾಮದಲ್ಲಿ ಅಂದಾಜುಗಳ ಪ್ರಕಾರ 5ರಿಂದ 6 ಸಾವಿರ ಜನ ಸಂಖ್ಯೆ ಇದೆ. 1500ಕ್ಕೂ ಹೆಚ್ಚಿನ ಕುಟುಂಬಗಳು ಇರುವ ದೊಡ್ಡ ಗ್ರಾಮವಾಗಿದೆ.
ವಾರಕ್ಕೆ 2 ದಿನ ಅಧಿಕಾರಿ ಕರ್ತವ್ಯ
ಈ ಗ್ರಾಮಕ್ಕೆ ನಿಯೋಜನೆಗೊಂಡ ಗ್ರಾಮಾಧಿಕಾರಿ ನೆರಿಯ ಮತ್ತು ಪುದುವೆಟ್ಟು ಗ್ರಾಮದಲ್ಲಿ ಕೂಡ 2 ದಿನಗಳಂತೆ ಪ್ರಭಾರವಾಗಿ ಕರ್ತವ್ಯ ನಿರ್ವಹಿಸುತ್ತಾರೆ. ಪಕ್ಕದಲ್ಲಿಯೇ ಕೊಯ್ಯೂರು ಗ್ರಾಪಂ ಕಚೇರಿ ಕಟ್ಟಡ ಇದೆ. ಗ್ರಾಮಾಧಿಕಾರಿ ಕಟ್ಟಡದ ಅವ್ಯವಸ್ಥೆ ಗಮನಿಸಿದ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಗ್ರಾಪಂಗೆ ಸಂಬಂಧಿಸಿದ ಕಟ್ಟಡಕ್ಕೆ ಸ್ಥಳಾಂತರಿಸಲು 4-5 ವಷರ್ಗಳ ಹಿಂದೆ ಒತ್ತಾಯ ಮಾಡಿದ್ದರು. ಗ್ರಾಮಾಧಿಕಾರಿಗಳ ಈಗಿರುವ ಕಟ್ಟಡಕ್ಕೆ 0.10 ಸೆಂಟ್ಸ್ ಜಾಗ ಕಂದಾಯಾಧಿಕಾರಿ ಕಚೇರಿ ಹಾಗೂ ವಸತಿಗೃಹಕ್ಕೆ ಎಂದು ಕಾದಿರಿಸಲಾಗಿದೆ. ಮತ್ತು 45 ವರ್ಷಗಳ ಹಿಂದೆ ಈ ಕಟ್ಟಡವನ್ನು ಕಟ್ಟಿದ್ದಾರೆ ಎಂದು ಅಂದಾಜಿಸಲಾಗಿದೆ.
ಹೊಸ ಕಟ್ಟಡ ನಿರ್ಮಾಣಕ್ಕಾಗಿ ಕಂದಾಯ ಇಲಾಖೆ ಮತ್ತು ಕೊಯ್ಯೂರು ಗ್ರಾಪಂಗೆ ಮನವಿ ಸಲ್ಲಿಸುತ್ತಾ ಇದ್ದೇವೆ. ಅದರೆ ಯಾವುದೇ ರೀತಿಯ ಪ್ರಯೋಜನ ಆಗಿಲ್ಲ. ಅನುದಾನ ಬಿಡುಗಡೆ ಸಂಬಂಧ, ಕಟ್ಟಡ ಶಿಥಿಲವಾಗಿ ಬೀಳುವ ಆತಂಕದಲ್ಲಿರುವ ಕುರಿತು ಇಲಾಖೆಗೆ ಪತ್ರ ಬರೆಯಲಾಗಿದೆ. ಈಗಾಗಲೇ ಗ್ರಾಪಂನ ಬದಲಿ ಕಟ್ಟಡದಲ್ಲಿ ಕಚೇರಿ ಕಾರ್ಯ ನಿರ್ವಹಿಸಬೇಕಾದ ಅನಿವಾರ್ಯ ಉಂಟಾಗಿದೆ. ಆದರೆ ಇಲ್ಲಿ ಸ್ಥಳಾವಕಾಶದ ಕೊರತೆ ಇದೆ. ಸಿದ್ದೇಶ್ ಎಚ್., ಗ್ರಾಮಾಧಿಕಾರಿ, ಕೊಯ್ಯೂರು ಕೊಯ್ಯೂರು ಗ್ರಾಮಾಧಿಕಾರಿ ಕಚೇರಿ ಸಂಪೂರ್ಣವಾಗಿ ಶಿಥಿಲವಾಗಿದೆ. ಇಲ್ಲಿನ ಪರಿಸ್ಥಿತಿಯನ್ನು ಗಮನಿಸಿದ ಗ್ರಾಪಂ ಕಟ್ಟಡಕ್ಕೆ ಸ್ಥಳಾಂತರ ಮಾಡಲು ಒತ್ತಾಯ ಮಾಡಿದ್ದೇವೆ. ನೂತನ ಕಟ್ಟಡದ ನಿರ್ಮಾಣಕ್ಕಾಗಿ ಸಂಬಂಧಿಸಿದ ಇಲಾಖೆಗೆ ಪಂಚಾಯಿತಿ ವತಿಯಿಂದ ಪ್ರತಿ ವರ್ಷವೂ ಮನವಿ ಸಲ್ಲಿಸುತ್ತಿದ್ದಾರೆ. ನಮ್ಮ ಪಂಚಾಯಿತಿಯಲ್ಲಿ ದೊಡ್ಡಮಟ್ಟದ ಅನುದಾನ ಹಾಗೂ ಆರ್ಥಿಕ ವ್ಯವಸ್ಥೆಯಿಲ್ಲ. ಅನುದಾನ ಇತಿ, ಮಿತಿಯಲ್ಲಿ ಸಹಕಾರ ಮಾಡಲು ಮಾತ್ರ ಸಾಧ್ಯವಿದೆ. ದಯಾಮಣಿ ಅಧ್ಯಕ್ಷರು, ಗ್ರಾಪಂ ಕೊಯ್ಯೂರು https://www.vijayavani.net/kadaba-taluk-literary-conference-on-30th https://www.vijayavani.net/sabreesha-art-center-anniversary