

ಕಡೂರು: ಕ್ಷೇತ್ರದ ಶಾಸಕರು ಎರಡೂವರೆ ವರ್ಷಗಳ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ನೀಡುವಲ್ಲಿ ವಿಫಲರಾಗಿದ್ದಾರೆ ಎಂದು ಕೆಪಿಸಿಸಿ ಸದಸ್ಯ ಕೆ.ಎಸ್.ಆನಂದ್ ಆರೋಪಿಸಿದರು.
ತಾಲೂಕಿನ ಎಲ್ಲ ಇಲಾಖೆಗಳಲ್ಲಿ ಹಗಲು ದರೋಡೆ ನಡೆಯುತ್ತಿದೆ. ಹಣವಿಲ್ಲದೆ ಗ್ರಾಮೀಣ ಭಾಗದ ಜನತೆಯ ಕೆಲಸಗಳು ಆಗುತ್ತಿಲ್ಲ. ಲೋಕೋಪಯೋಗಿ ಹಾಗೂ ನೀರಾವರಿ ಇಲಾಖೆಗಳಲ್ಲಿ ಬೋಗಸ್ ಬಿಲ್ಗಳ ಹಾವಳಿ ಹೆಚ್ಚಾಗಿದೆ. ಈ ಬಗ್ಗೆ ದಾಖಲೆ ದೊರೆಯದಂತೆ ನೋಡಿಕೊಳ್ಳಲಾಗುತ್ತಿದೆ. ಈ ಬಗ್ಗೆ ಕಾನೂನು ಹೋರಾಟ ನಡೆಸಲಾಗುವುದು ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯದಲ್ಲಿ ತಮ್ಮದೇ ಸರ್ಕಾರವಿದ್ದರೂ ಕ್ಷೇತ್ರದಿಂದ ತಪ್ಪಿಹೋದ ತಾಯಿ-ಮಗು ಆಸ್ಪತ್ರೆ ಮಂಜೂರು ಮಾಡಿಸಿಕೊಳ್ಳುವಲ್ಲೂ ಶಾಸಕರು ವಿಫಲವಾಗಿದ್ದಾರೆ. ಶಾಸಕರು ಭ್ರಷ್ಟಾಚಾರ ನಡೆಸಿಲ್ಲ ಎನ್ನುವುದಾದರೆ ಬಹಿರಂಗ ಚರ್ಚೆಗೆ ಮುಂದಾಗಲಿ ಎಂದು ಸವಾಲು ಹಾಕಿದರು.
ತಾಲೂಕಿಗೆ ಶಾಶ್ವತ ನೀರಾವರಿ ಕಲ್ಪಿಸುವ ಗೋಂಧಿ ಯೋಜನೆ ಯಾವ ಸರ್ಕಾರದ ಅವಧಿಯಲ್ಲಿ ಅಗಿದೆ? ಅಂದು ಯಾರು ಶಾಸಕರಾಗಿದ್ದರು? ಎಂದು ಕ್ಷೇತ್ರದ ಜನತೆ ತಿಳಿದಿದ್ದಾರೆ. ಆದರೆ ನೀರಾವರಿ ಯೋಜನೆ ಹೆಸರನ್ನು ತಿರುಚಿ ನಮ್ಮ ಪ್ರಯತ್ನ ಎಂಬ ಸುಳ್ಳನ್ನು ಬಿಂಬಿಸಿದರೆ ಯಾವುದೇ ಪ್ರಯೋಜನವಿಲ್ಲ ಎಂದು ಹೇಳಿದರು.
ಮುಖಂಡರಾದ ಗುಮ್ಮನಹಳ್ಳಿ ಅಶೋಕ್, ಕೆ.ಜಿ.ಶ್ರೀನಿವಾಸ್, ವಿನಯ್ ಮತ್ತಿತರಿದ್ದರು.