

ಹನೂರು: ತಾಲೂಕಿನ ಹಲಗಾಪುರ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಅಭಿವೃದ್ಧಿ ಪಡಿಸಿದ್ದ ಕೆರೆ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಶುಕ್ರವಾರ ಬಾಗಿನ ಅರ್ಪಿಸುವ ಮೂಲಕ ಗ್ರಾಮಸ್ಥರಿಗೆ ಒಪ್ಪಿಸಲಾಯಿತು.
ಗ್ರಾಮದ ದೊಡ್ಡಕೆರೆಯಲ್ಲಿ ಹೂಳು ತುಂಬಿದ್ದು, 5 ವರ್ಷದಿಂದ ಸಮರ್ಪಕವಾದ ಮಳೆಯಾಗದ ಹಿನ್ನೆಲೆಯಲ್ಲಿ ನೀರು ಸಂಗ್ರಹವಾಗುತ್ತಿರಲಿಲ್ಲ. ಇದನ್ನು ಮನಗಂಡ ಧರ್ಮಸ್ಥಳ ಸಂಸ್ಥೆ ನಮ್ಮೂರು ನಮ್ಮ ಕೆರೆ ಯೋಜನೆಯಡಿ ರಾಜ್ಯದ 874ನೇ ಕೆರೆಯಾಗಿ ಅಭಿವೃದ್ಧಿ ಪಡಿಸಲಾಗಿತ್ತು.
ಇತ್ತೀಚೆಗೆ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ಕೆರೆ ಭರ್ತಿಗೊಂಡಿತ್ತು. ಹಾಗಾಗಿ ಯೋಜನೆಯ ಪದಾಧಿಕಾರಿಗಳು ಶುಕ್ರವಾರ ಗ್ರಾಮಸ್ಥರೊಡನೆ ಆಗಮಿಸಿ ಕೆರೆಗೆ ಬಾಗಿನ ಅರ್ಪಿಸಿದರು. ಜತೆಗೆ ಯೋಜನೆಯ ನಾಮಫಲಕವನ್ನು ಅನಾವರಣಗೊಳಿಸಿ ಗ್ರಾಮಸ್ಥರಿಗೆ ಒಪ್ಪಿಸಲಾಯಿತು. ಯೋಜನೆಯ ಈ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು.
ಹಲಗಾಪುರ, ಶಾಗ್ಯ ಮಠದ ಶ್ರೀಗಳು, ಯೋಜನೆಯ ಜಿಲ್ಲಾ ನಿರ್ದೇಶಕ ದಿನೇಶ್, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ರಾಜೇಂದ್ರ, ರಾಚಪ್ಪ, ತಾಲೂಕು ಯೋಜನಾಧಿಕಾರಿ ಪ್ರವೀಣ್‌ಕುಮಾರ್, ಇಂಜಿನಿಯರ್ ಪುಷ್ಪರಾಜ್ ಇತರರಿದ್ದರು.