

ವಿಜಯವಾಣಿ ಸುದ್ದಿಹಾಲ ಧಾರವಾಡ
ತಾಲೂಕಿನ ಹಳೆ ತೇಗೂರ ಗ್ರಾಮದಲ್ಲಿ ನಮ್ಮೂರು ನಮ್ಮ ಕೆರೆ ಯೋಜನೆ ಅಡಿ ಪುನಃಶ್ಚೇತನಗೊಂಡ ಜೋಗಿ ಕೆರೆಗೆ ಬಾಗಿನ ಅರ್ಪಣೆ ಮತ್ತು ಕೆರೆ ಅಂಗಳದಲ್ಲಿ ಗಿಡ ನಾಟಿ ಕಾರ್ಯಕ್ರಮ ಶುಕ್ರವಾರ ಜರುಗಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಗ್ರಾಮ ಪಂಚಾಯತಿ ಮತ್ತು ಕೆರೆ ಅಭಿವೃದ್ಧಿ ಸಮಿತಿ ಆಶ್ರಯದಲ್ಲಿ ಏರ್ಪಡಿಸಿದ್ದ ಸಮಾರಂಭದ ಸಾನ್ನಿಧ್ಯವನ್ನು ನಿಚ್ಚಣಕಿ ಶ್ರೀ ಗುರು ಮಡಿವಾಳೇಶ್ವರ ಮಠದ ಶ್ರೀ ಪಂಚಾರಿ ಸ್ವಾಮೀಜಿ ವಹಿಸಿದ್ದರು.
ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ವಸಂತ ಅರ್ಕಾಚಾರ ಮಾತನಾಡಿ, ಗ್ರಾಮಸ್ಥರ ಬೇಡಿಕೆಯಂತೆ ಅದ್ಭುತವಾಗಿ ಕೆರೆ ನಿರ್ಮಾಣ ಮಾಡಲಾಗಿದೆ. ಮುಂಗಾರು ಮಳೆಯಿಂದ ಕೆರೆ ತುಂಬಿದೆ. ಕೆರೆ ಅಂಗಳದಲ್ಲಿ ಗಿಡ ನಾಟಿ ಮಾಡಿರುವುದು ಸಣ್ಣ ವಿಚಾರವಾದರೂ ಕೆರೆಯ ಸದೃಢತೆಗೆ ಸಹಾಯವಾಗಲಿದೆ ಎಂದರು.
ವಲಯ ಅರಣ್ಯ ಅಧಿಕಾರಿ ಪ್ರದಿಪ ಪವಾರ ಮಾತನಾಡಿ, ಜೋಗಿ ಕೆರೆ ಸುತ್ತ ಕೃಷಿ ಭೂಮಿ ಮತ್ತು ಗುಡ್ಡಗಳಿವೆ. ಕೆರೆ ನಿರ್ಮಾಣಕ್ಕೆ ಅಚ್ಚುಕಟ್ಟು ಜಾಗವಿದೆ. ಮುಂದಿನ ದಿನಗಳಲ್ಲಿ ಕೆರೆಗೆ ಸಸಿಗಳನ್ನು ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ ಜಿಲ್ಲಾ ನಿರ್ದೇಶಕ ಪ್ರದೀಪ ಶೆಟ್ಟಿ ಮಾತನಾಡಿ, ರಾಜ್ಯಾದ್ಯಂತ ಸುಮಾರು 750 ಕೆರೆಗಳನ್ನು ಪುನಶ್ಚೇತನಗೊಳಿಸಲಾಗಿದೆ. ಜತೆಗೆ ಧಾರ್ಮಿಕ , ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದಲ್ಲೂ ಕೊಡುಗೆ ನೀಡಲಾಗುತ್ತಿದೆ ಎಂದರು.
ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಪುಂಡಲೀಕ ಹಡಪದ, ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಭೀಮಪ್ಪ ಕಮತರ, ಗ್ರಾಪಂ ಅಧ್ಯೆ ಲಕ್ಷ್ಮೀ ಬೆಳವಲದ, ಸದಸ್ಯರಾದ ಮಾರುತಿ ಭಂಡಿವಡ್ಡರ, ಈರಯ್ಯ ಹಿರೇಮಠ, ಮಂಜುಳಾ ಜೋಗಿ, ಸಿದ್ದಲಿಂಗವ್ವ ಗುಡದರಿ, ತಾಲೂಕು ಯೋಜನಾಧಿಕಾರಿ ಮಯೂರ ತೋರಸ್ಕರ, ಅಭಿಯಂತರ ನಿಂಗರಾಜ್ ಮಾಳವಾಡ, ಉಪವಲಯ ಅರಣ್ಯ ಅಧಿಕಾರಿ ಚಂದ್ರಶೇಖರ ರೊಟ್ಟಿ, ಪ್ರಗತಿ ಬಂಧು ಮತ್ತು ಸ್ವಸಹಾಯ ಸಂದ, ಶೌರ್ಯ ವಿಪತ್ತು ತಂಡದ ಸದಸ್ಯರು ಮತ್ತು ಗ್ರಾಮಸ್ಥರು, ಇತರರು ಇದ್ದರು.