ಲೋಕ ಕಲ್ಯಾಣಕ್ಕಾಗಿ ಲಕ್ಷ ತುಳಸಿ ಅರ್ಚನೆ

LAKSHA TULASI
Published on

ಭಟ್ಕಳ: ತಾಲೂಕಿನ ಮಾರುಕೇರಿಯ ಹೂತ್ಕಳದ ಶ್ರೀ ಕ್ಷೇತ್ರ ಧನ್ವಂತರಿ ಮಹಾವಿಷ್ಣುಮೂರ್ತಿ ವಿಘ್ನೇಶ್ವರ ದೇವಸ್ಥಾನದಲ್ಲಿ ಗುರುವಾರ ಆಷಾಢ ಶುದ್ಧ ಪ್ರಥಮ ಏಕಾದಶಿಯಂದು ಲೋಕಕಲ್ಯಾಣಾರ್ಥವಾಗಿ ಲಕ್ಷ ತುಳಸಿ ಅರ್ಚನೆ ಹಾಗೂ ಸಾಮೂಹಿಕ ವಿಷ್ಣು ಸಹಸ್ರನಾಮ ಪಾರಾಯಣ ಸಂಪನ್ನಗೊಂಡಿತು.

ಬೆಳಗ್ಗೆ ಅಭಿಷೇಕದೊಂದಿಗೆ ವಿಘ್ನೇಶ್ವರ ದೇವರಿಗೆ ಸಹಸ್ರ ದೂರ್ವಾಚನೆ, ವಿಶೇಷ ಅಲಂಕಾರ ಪೂಜೆ, ಶ್ರೀ ಧನ್ವಂತರಿಯಲ್ಲಿ ಶ್ರೀಸೂಕ್ತ, ಪುರುಷಸೂಕ್ತಾದಿ ವಿಶೇಷ ಅಭಿಷೇಕಗಳು, ಕಲ್ಪೋಕ್ತ ಮಹಾಪೂಜೆ, ಲಕ್ಷ ತುಳಸಿ ಅರ್ಚನೆ ಹಾಗೂ ಸಾಮೂಹಿಕ ವಿಷ್ಣು ಪಾರಾಯಣ, ಮಹಾಮಂಗಳಾರತಿ ಪ್ರಸಾದ ವಿತರಣೆ ನಡೆಯಿತು.

ಮಧ್ಯಾಹ್ನ ಭಕ್ತಾದಿಗಳಿಗೆ ಉಪಾಹಾರ ವ್ಯವಸ್ಥೆ ಮಾಡಲಾಗಿತ್ತು. ದೇವಸ್ಥಾನದ ಪ್ರಧಾನ ಅರ್ಚಕ ಶಂಕರ ಭಟ್ಟ ಅವರ ನೇತೃತ್ವದಲ್ಲಿ ಸುಬ್ರಾಯ ಭಟ್ಟ, ಶ್ರೀಧರ ಭಟ್ಟ, ಸತೀಶ ಭಟ್ಟ, ವಿನಾಯಕ ಉಪಾಧ್ಯಾಯ, ಯೋಗೇಶ ಹೆಬ್ಬಾರ, ನಾರಾಯಣ ಉಪಾಧ್ಯಾಯ, ಗಣಪಯ್ಯ ಹೆಗಡೆ ಸೇರಿದಂತೆ 50ಕ್ಕೂ ಅಧಿಕ ಪುರೋಹಿತರು ಲಕ್ಷ ತುಳಸಿ ಅರ್ಚನೆಯಲ್ಲಿ ಪಾಲ್ಗೊಂಡಿದ್ದರು.

ಇದೇ ಸಂದರ್ಭದಲ್ಲಿ ಮಹಿಳೆಯರು ವಿಷ್ಣು ಸಹಸ್ರನಾಮ ಓದಿದರು. ಮಳೆಯ ಮಧ್ಯೆಯೂ ನೂರಾರು ಭಕ್ತರು ಆಗಮಿಸಿದ್ದರು. ಮಧ್ಯಾಹ್ನ 3 ಗಂಟೆಯಿಂದ ಕ್ಷೇತ್ರದಲ್ಲಿ ಲೋಕ ಕಲ್ಯಾಣಾರ್ಥವಾಗಿ ಕರೊನಾ ನಿವಾರಣೆಗಾಗಿ ಈ ಹಿಂದೆ ಸಂಕಲ್ಪಿಸಿದ ಕೋಟಿ ಧನ್ವಂತರಿ ಜಪ ನಡೆಸಲಾಯಿತು. ಸಂಜೆ ಸ್ಥಳೀಯ ಕಲಾವಿದರಿಂದ ಏರ್ಪಡಿಸಲಾದ ರಾವಣವಧೆ ಯಕ್ಷಗಾನ ತಾಳಮದ್ದಲೆ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net