

ಉಡುಪಿ: ಜೀವನದಲ್ಲಿ ಭಗವಂತನಿಗೆ ಕಪ್ಪ ಕೊಡುವುದು ಮನುಷ್ಯನ ಕರ್ತವ್ಯ. ಸಮಾಜದಲ್ಲಿ ಯಾರಿಗೆ ಯಾವುದು ಅವಶ್ಯಕತೆ ಇದೆಯೋ ಅದನ್ನು ನೀಡುವುದೇ ದೇವರಿಗೆ ನೀಡುವ ನಿಜವಾದ ಕಪ್ಪ. ಈ ನಿಟ್ಟಿನಲ್ಲಿ ಸಮಾಜದಲ್ಲಿ ಇನ್ನೊಬರಿಗೆ ಭಾರವಾಗದೆ ಅಭಾರಿಯಾಗಿ ಬದುಕಿದಾಗ ಜೀವನ ಸಾರ್ಥಕವಾಗುತ್ತದೆ ಎಂದು ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಹೇಳಿದರು.
ಶನಿವಾರ ನಿಟ್ಟೂರು ಪ್ರೌಢಶಾಲೆಯಲ್ಲಿ 32 ವರ್ಷ ಶಿಕ್ಷಕರಾಗಿ, 5 ವರ್ಷ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದಿದ ಮುರಲಿ ಕಡೆಕಾರ್ ಅವರ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ. ರಘುಪತಿ ಭಟ್, ಮುರಲಿ ಕಡೆಕಾರು ಅವರು ಎಲ್ಲ ರಂಗಗಳಲ್ಲಿ ಸೇವೆ ಸಲ್ಲಿಸಿ, ಜನಬಲದ ಶ್ರೀಮಂತಿಕೆ ಗಳಿಸಿದ್ದಾರೆ. ಯಕ್ಷ ಶಿಕ್ಷಣದಿಂದ ಮಕ್ಕಳ ಪ್ರಬುದ್ಧತೆ ವೃದ್ಧಿಯಾಗಿದೆ. ನಿಟ್ಟೂರು ಸಂಸ್ಥೆಯ ಏಳಿಗೆಗೆ ಕಡೆಕಾರ್ ಸಲಹೆ, ಮಾರ್ಗದರ್ಶನ ನಿವೃತ್ತಿಯ ಬಳಿಕವೂ ಮುಂದುವರಿಯಲಿದೆ ಎಂದು ಆಶಿಸಿದರು.
ಯಕ್ಷಗಾನ ವಿದ್ವಾಂಸ ಡಾ.ಎಂ. ಪ್ರಭಾಕರ ಜೋಶಿ, ಸಾಹಿತಿ ಅಂಬಾತನಯ ಮುದ್ರಾಡಿ, ರಂಗಕರ್ಮಿ ಪ್ರೊ.ಉದ್ಯಾವರ ಮಾಧವ ಆಚಾರ್ಯ ಅಭಿನಂದನಾ ಭಾಷಣ ಮಾಡಿದರು. ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಕಕ್ಕುಂಜೆ ನಾಗಾನಂದ ಮಾತನಾಡಿದರು.
ಮುಖ್ಯ ಶಿಕ್ಷಕ ಮುರಲಿ ಕಡೆಕಾರ್ ಅವರಿಗೆ ಸಂಬಂಧಿಸಿದ ಸಾಕ್ಷ್ಯಚಿತ್ರವನ್ನು ಬಿಡುಗಡೆ ಮಾಡಲಾಯಿತು. ನಿಟ್ಟೂರು ಪ್ರೌಢಶಾಲಾ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಯೋಗೀಶ್ಚಂದ್ರಾಧರ, ಕಾರ್ಯದರ್ಶಿ ಪ್ರದೀಪ್ ಜೋಗಿ ಉಪಸ್ಥಿತರಿದ್ದರು. ಶಾಲಾಭಿವೃದ್ದಿ ಸಮಿತಿಯ ಉಪಾಧ್ಯಕ್ಷ ಗಂಗಾಧರ್ ರಾವ್ ಸ್ವಾಗತಿಸಿದರು. ಎಚ್.ಎನ್. ಶೃಂಗೇಶ್ವರ್ ಕಾರ‌್ಯಕ್ರಮ ನಿರೂಪಿಸಿದರು. ನಿವೃತ್ತ ಮುಖ್ಯ ಶಿಕ್ಷಕ ಎಸ್.ವಿ. ಭಟ್ ವಂದಿಸಿದರು.
ಬಡ ವಿದ್ಯಾರ್ಥಿನಿಗೆ ಮನೆ ಕೊಡುಗೆ: ನಿಟ್ಟೂರು ಪ್ರೌಢಶಾಲೆ ಮುಖ್ಯಶಿಕ್ಷಕ ಮುರಲಿ ಕಡೆಕಾರ್ ಅವರು ತನ್ನ ವೈಯಕ್ತಿಕ ಹಣದಿಂದ ತೀರಾ ಬಡಕುಟುಂಬದ ಕಕ್ಕುಂಜೆ ವಾರ್ಡ್ ನಿವಾಸಿ, ನಿಟ್ಟೂರು ಪ್ರೌಢ ಶಾಲಾ ವಿದ್ಯಾರ್ಥಿನಿ ನಯನಾ ಅವರಿಗೆ ಮನೆ ನಿರ್ಮಿಸಿ, ನಿವೃತ್ತಿಯ ದಿನದಂದು ಶನಿವಾರ ಹಸ್ತಾಂತರಿಸಿದರು. ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಹೊಸ ಮನೆಯಲ್ಲಿ ದೀಪ ಬೆಳಗಿದರು. ಶಾಸಕ ರಘುಪತಿ ಭಟ್, ಸ್ಥಳೀಯ ನಗರಸಭಾ ಸದಸ್ಯರಾದ ಬಾಲಕೃಷ್ಣ ಶೆಟ್ಟಿ, ಗಿರಿಧರ್ ಕರಂಬಳ್ಳಿ ಮೊದಲಾದವರು ಉಪಸ್ಥಿತರಿದ್ದರು.