

ಬೆಂಗಳೂರು: ಲಾಕ್ಡೌನ್ನಿಂದ ನಷ್ಟಕ್ಕೊಳಗಾಗಿರುವ ಬಿಎಂಟಿಸಿಯ ಆದಾಯ ಉಳಿಸಲು ಸಿಬ್ಬಂದಿಗೆ ವಿಶ್ರಾಂತಿ ನೀಡಲು ಅಧಿಕಾರಿಗಳು ಮುಂದಾಗಿದ್ದಾರೆ.
ಕರೊನಾ ಭೀತಿಯಿಂದಾಗಿ ಮಾಡಲಾದ ಲಾಕ್ಡೌನ್ನಿಂದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳಿಗೆ 1,800 ಕೋಟಿ ರೂ. ನಷ್ಟವಾಗಿದೆ. ಇದರಿಂದ ಸಿಬ್ಬಂದಿ ವೇತನ ಪಾವತಿಸಲೂ ಆಗದೆ ಸರ್ಕಾರದ ನೆರವು ಪಡೆಯ ಲಾಗಿದೆ. ಅಲ್ಲದೆ, ನಷ್ಟವನ್ನು ಸರಿದೂಗಿಸಲು ಅನಗತ್ಯ ಖರ್ಚಿಗೆ ಕಡಿವಾಣ ಹಾಕಲು ನಿಗಮಗಳು ನಿರ್ಧರಿಸಿವೆ. ಉಳಿದೆಲ್ಲ ನಿಗಮಗಳಿಗಿಂತ ಒಂದು ಹೆಜ್ಜೆ ಮುಂದೆ ಹೋಗಿರುವ ಬಿಎಂಟಿಸಿ, ಸಿಬ್ಬಂದಿಗೆ ನೀಡಲಾಗುತ್ತಿದ್ದ ಓವರ್ ಟೈಂ (ಓಟಿ) ಕೆಲಸದ ಭತ್ಯೆ ನೀಡದಿರಲು ನಿರ್ಧರಿಸಿದೆ. ಅದಕ್ಕಾಗಿ ಸಿಬ್ಬಂದಿಗೆ ಕೆಲಸದ ನಡುವೆ ಕೆಲ ಸಮಯ ವಿಶ್ರಾಂತಿ ತೆಗೆದುಕೊಳ್ಳುವಂತೆ ಸೂಚಿಸುತ್ತಿದೆ.
67 ಸಾವಿರ ಟ್ರಿಪ್ಗಳು: ಬಿಎಂಟಿಸಿಯಲ್ಲಿ ಒಟ್ಟು 6,661 ಬಸ್ಗಳಿದ್ದು, 6,161 ಮಾರ್ಗಗಳಲ್ಲಿ ಸಂಚರಿಸುತ್ತಿವೆ. ನಿತ್ಯ 67 ಸಾವಿರ ಟ್ರಿಪ್ಗಳ ಮೂಲಕ 11.71 ಲಕ್ಷ ಕಿ.ಮೀ. ಬಸ್ ಸೇವೆ ನೀಡಲಾಗುತ್ತಿದೆ. ಆ ಪೈಕಿ ಶೇ. 20 ಟ್ರಿಪ್ಗಳು 20 ಕಿ.ಮೀ.ಗಿಂತ ಹೆಚ್ಚಿನ ಅಂತರ ಹೊಂದಿವೆ. ಆ ಮಾರ್ಗ ಕ್ರಮಿಸಲು 3 ಗಂಟೆಗೂ ಹೆಚ್ಚಿನ ಅವಧಿ ಬೇಕಾಗಲಿದೆ. ನಿಗದಿತ ನಿಲ್ದಾಣಕ್ಕೆ ತೆರಳಿದ ನಂತರ ವಾಪಸ್ ಅದೇ ಮಾರ್ಗವಾಗಿ ಬರಬೇಕಿದೆ. ಹೀಗಾಗಿ ದೂರದ ಮಾರ್ಗದ ಬಸ್ನ ಸೇವೆ ನೀಡಲು ಕನಿಷ್ಠ 7 ಗಂಟೆ ಬೇಕಾಗಲಿದೆ. ಇದನ್ನೂ ಓದಿ: ಇದು ಯುದ್ಧ ಮಾಡುವ ಹೊತ್ತಲ್ಲ ಭತ್ಯೆ ನೀಡಬೇಕು: ದೂರದ ಮಾರ್ಗಗಳಿಗೆ ತೆರಳುವ ಬಸ್ಗಳ ಸಿಬ್ಬಂದಿ ಕೆಲಸದ ಅವಧಿ ಸಹಜವಾಗಿ ಹೆಚ್ಚಿರುತ್ತದೆ. ಉದಾಹರಣೆಗೆ ಕೆ.ಆರ್. ಮಾರುಕಟ್ಟೆ-ಆದಿಗೊಂಡನಹಳ್ಳಿ ಮಾರ್ಗದ ಬಸ್ ಬೆಳಗ್ಗೆ 8.15ಕ್ಕೆ ಹೊರಟರೆ ರಾತ್ರಿ 7.30ಕ್ಕೆ ವಾಪಸಾಗಲಿದೆ. ಅದರಂತೆ ಒಬ್ಬ ಚಾಲಕ ಮತ್ತು ನಿರ್ವಾಹಕನ ಕೆಲಸದ ಅವಧಿ 11.15 ಗಂಟೆಯಾಗಲಿದೆ. ಸಿಬ್ಬಂದಿಯ ಕೆಲಸದ ಅವಧಿ 8 ಗಂಟೆ ಇರುತ್ತದೆ. ಅದಕ್ಕಿಂತ ಹೆಚ್ಚಿನ ಅವಧಿ ಕೆಲಸ ಮಾಡಿದರೆ ಪ್ರತಿ ಗಂಟೆಗೆ ಮೂಲವೇತನದಲ್ಲಿ ಲೆಕ್ಕ ಹಾಕಿ ಓಟಿ ಭತ್ಯೆಯನ್ನು ನೀಡಬೇಕು. ಈ ಹೆಚ್ಚುವರಿ ಕೆಲಸದ ಅವಧಿ (ಓಟಿ) ಭತ್ಯೆ ಉಳಿಸಲು ಅಧಿಕಾರಿಗಳು ಹೊಸ ಉಪಾಯ ಕಂಡುಕೊಂಡಿದ್ದಾರೆ. ಅದರಂತೆ ದೂರದ ಮಾರ್ಗದ ಪ್ರಯಾಣ ಆರಂಭಿಸುವುದಕ್ಕೂ ಮುನ್ನ ನೀಡಲಾಗುವ ಟ್ರಿಪ್ ಶೀಟ್ನಲ್ಲಿ ವಿಶ್ರಾಂತಿ ಅವಧಿ ನಮೂದಿಸಿ, ಬಸ್ ಹೊರಟ ನಂತರ ಸಿಗುವ ಪ್ರಮುಖ ನಿಲ್ದಾಣದಲ್ಲಿ ನಿರ್ವಾಹಕರು 30ರಿಂದ 40 ನಿಮಿಷ ವಿಶ್ರಾಂತಿ ಪಡೆಯಬಹುದು ಎಂದು ತಿಳಿಸಲಾಗಿದೆ. ಆದರೆ, ಎಷ್ಟೇ ವಿಶ್ರಾಂತಿ ಪಡೆದರೂ ಕೆಲಸದ ಅವಧಿ ಹೆಚ್ಚಾಗುತ್ತಿದೆ. ಹೀಗಾಗಿ ಕೆಲಸದ ಅವಧಿ ಲೆಕ್ಕ ಹಾಕುವಾಗ, ವಿಶ್ರಾಂತಿ ಅವಧಿ ನೆಪದಲ್ಲಿ ಹೆಚ್ಚುವರಿ ಕೆಲಸದ ಅವಧಿಯನ್ನು ಲೆಕ್ಕಕ್ಕೆ ತೆಗೆದುಕೊಳ್ಳದಿರಲು ನಿರ್ಧರಿಸಲಾಗಿದೆ. ಇದರಿಂದ ಸಿಬ್ಬಂದಿ ಭತ್ಯೆಗೆ ಕೊಕ್ಕೆ ಬೀಳಲಿದೆ.
ಬಿಎಂಟಿಸಿ ಸಿಬ್ಬಂದಿಗೆ ಹೆಚ್ಚುವರಿ ಕೆಲಸದ ಅವಧಿ ಭತ್ಯೆ ನೀಡುವ ಬದಲು ವಿಶ್ರಾಂತಿ ಅವಧಿಯನ್ನು ಲೆಕ್ಕ ಹಾಕಲಾಗುತ್ತಿದೆ. ಇದು ಕಾರ್ವಿುಕ ವಿರೋಧಿಯಾಗಿದ್ದು, ಅವರಿಗೆ ನೀಡಬೇಕಾದ ಸವಲತ್ತನ್ನು ನೀಡಲೇಬೇಕು. | ರೇವಪ್ಪ ರಾಜ್ಯ ರಸ್ತೆ ನೌಕರರ ಫೆಡರೇಷನ್ (ಸಿಐಟಿಯು) ಅಧ್ಯಕ್ಷ
ಮಾಸಿಕ 6 ಕೋಟಿ ರೂ. ಉಳಿತಾಯ
ಹೊಸ ನೀತಿಯ ಅನುಷ್ಠಾನದಿಂದಾಗಿ ಬಿಎಂಟಿಸಿ ನಿತ್ಯ 20 ಲಕ್ಷ ರೂ. ಹಾಗೂ ಮಾಸಿಕ 6 ಕೋಟಿ ರೂ.ಗಳಿಗೂ ಹೆಚ್ಚಿನ ವೆಚ್ಚ ಉಳಿಯಲಿದೆ. ಓಟಿ ಭತ್ಯೆಗೆ ವಿಶ್ರಾಂತಿ ಅವಧಿ ಲೆಕ್ಕ ಹಾಕುವ ಕುರಿತಂತೆ ಕೆಲ ಡಿಪೋಗಳಲ್ಲಿ ಚಾಲಕ ಮತ್ತು ನಿರ್ವಾಹಕರಿಗೆ ಮೌಖಿಕವಾಗಿ ಆದೇಶಿಸಲಾಗಿದೆ. ಬಿಎಂಟಿಸಿಯಿಂದ ಅಧಿಕೃತ ಆದೇಶ ಹೊರಬರಬೇಕಿದೆ.
| ಗಿರೀಶ್ ಗರಗ