ಅನುದಾನಿತ ಶಾಲಾ-ಕಾಲೇಜು ನೌಕರರಿಗೆ ನಿಶ್ಚಿತ ಪಿಂಚಣಿ ನೀಡಿ

05TMK_TR_Protest
Published on

ತುಮಕೂರು: ಅನುದಾನಿತ ಶಾಲಾ ಕಾಲೇಜುಗಳ ನೌಕರರಿಗೆ ನಿಶ್ಚಿತ ಪಿಂಚಣಿ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂದ ಪದಾಧಿಕಾರಿಗಳು ಸಾಂಕೇತಿಕ ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಶನಿವಾರ ಸಮಾವೇಶಗೊಂಡಿದ್ದ ತುಮಕೂರು ಮತ್ತು ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಪದಾಧಿಕಾರಿಗಳು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ರವಾನಿಸಿದರು.

ರಾಜ್ಯ ಸಂದ ಪದಾಧಿಕಾರಿ ವೆಂಕಟಾಚಲಯ್ಯ ಮಾತನಾಡಿ, ಸರ್ಕಾರ 2006ರಿಂದ ಅನುದಾನಿತ ವಿದ್ಯಾಸಂಸ್ಥೆಗಳ ನೌಕರರಿಗೆ ಹಳೆಯ ನಿಶ್ಚಿತ ಪಿಂಚಣಿಯಾಗಲಿ, ವಂತಿಗೆ ಆಧಾರಿತ ನೂತನ ಪಿಂಚಣಿ ಯೋಜನೆ ಸೌಲಭ್ಯ ನೀಡದೇ ಇರುವುದರಿಂದ ಸಾವಿರಾರು ನೌಕರರು ಸಂಬಳ ಪಡೆದು ಬರಿಗೈಯಲ್ಲಿ ನಿವೃತ್ತರಾಗಿದ್ದು, ನಿವೃತ್ತಿ ನಂತರ ಸಂಕಷ್ಟದಲ್ಲಿ ಬದುಕು ನಡೆಸುವಂತಾಗಿದೆ ಎಂದರು.

ಸರ್ಕಾರಿ ನೌಕರರು ಮತ್ತು ಅನುದಾನಿತ ನೌಕರರ ಮಧ್ಯೆ ಯಾವುದೇ ತಾರತಮ್ಯವಿಲ್ಲದೆ ಇದ್ದರು, ಯಾವುದೇ ನಿವೃತ್ತ ಯೋಜನೆಗಳಿಲ್ಲದೇ ನೌಕರರ ಭವಿಷ್ಯ ಡೋಲಾಯವಾನವಾಗಿದ್ದು, 10 ವರ್ಷಗಳಿಂದ ಸಂಟನೆ ನಿರಂತರವಾಗಿ ಬೇಡಿಕೆ ಈಡೇರಿಕೆಗೆ ಒತ್ತಾಯಿಸುತ್ತಿದೆ. ಸರ್ಕಾರಗಳ ಅನುದಾನಿತ ನೌಕರರ ಹಿತ ಕಾಯುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿಲ್ಲ, ಸರ್ಕಾರ ಅನುದಾನಿತ ನೌಕರರ ಬೇಡಿಕೆ ಈಡೇರಿಸದೆ ಇದ್ದಲ್ಲಿ ಜ.4ರಿಂದ ಅಹೋರಾತ್ರಿ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ತುಮಕೂರು ಘಟಕದ ಅಧ್ಯಕ್ಷ ಹನುಮೇಶ್ ಮಾತನಾಡಿ, ಅನುದಾನಿತ ಶಾಲಾ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರು ಕರೊನಾ ಆರಂಭದಿಂದ ಸಂಕಷ್ಟದಲ್ಲಿದ್ದಾರೆ, ಶಾಲೆಗಳು ನಡೆಯದ ಕಾರಣ ವೇತನಗಳು ಸಕಾಲದಲ್ಲಿ ಬಿಡುಗಡೆಯಾಗುತ್ತಿಲ್ಲ ಎನ್ನುವುದು ಒಂದೆಡೆಯಾದರೆ, ನಿವೃತ್ತಿಯ ನಂತರದ ಬದುಕು ದುಸ್ತರವಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net