ಕನ್ನಡ ವಿವಿ ಬಗ್ಗೆ ಆಕ್ಷೇಪಾರ್ಹ ಫೇಸ್‌ಬುಕ್ ಪೋಸ್ಟ್

4 HPT 1
Published on

ಕ್ರಮಕ್ಕೆ ಒತ್ತಾಯಿಸಿ ಸಂಶೋಧನಾರ್ಥಿಗಳ ಪ್ರತಿಭಟನೆ

ಹೊಸಪೇಟೆ: ಕನ್ನಡ ವಿಶ್ವವಿದ್ಯಾಲಯದ ಕುರಿತು ಫೇಸ್‌ಬುಕ್‌ನಲ್ಲಿ ನಿಂದನಾತ್ಮಕ ಪೋಸ್ಟ್ ಮಾಡಿರುವ ಮುರಳಿ ಕೃಷ್ಣಮದ್ದಿಕೇರ ಎಂಬುವವರ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಬೇಕು ಎಂದು ಆಗ್ರಹಿಸಿ ವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಗಳು ಶನಿವಾರ ಕನ್ನಡ ವಿವಿ ಕ್ಯಾಂಪಸ್‌ನಲ್ಲಿ ಪ್ರತಿಭಟನೆ ನಡೆಸಿದರು.
ವಿಶ್ವವಿದ್ಯಾಲಯದ `ಬಿ' ಗೇಟ್ ಮೂಲಕ ಪತ್ರಿಭಟನೆ ಆರಂಭಿಸಿದ ಸಂಶೋಧನಾ ವಿದ್ಯಾರ್ಥಿಗಳ ಕುಲಪತಿ ಕಚೇರಿ ತಲುಪಿ ಉಪ ಕುಲಸಚಿವ ಡಾ.ಎ.ವೆಂಕಟೇಶಗೆ ಮನವಿಯನ್ನು ಪತ್ರ ಸಲ್ಲಿಸಿದರು.

ಜ್ಞಾನಪೀಠ ಪ್ರಶಸ್ತಿ ಪಡೆದ ಡಾ.ಚಂದ್ರಶೇಖರ್ ಕಂಬಾರರ ನೇತೃತ್ವದಲ್ಲಿ ಪ್ರಾರಂಭವಾಗಿರುವ ಕನ್ನಡ ವಿಶ್ವವಿದ್ಯಾಲಯ ನಾಡಿನ ಹೆಮ್ಮೆಯ ಗುರುತಾಗಿದೆ. ಸಂಶೋಧನಾ ಕೊಡುಗೆಗಳಿಂದ ಇಡೀ ದೇಶಕ್ಕೆ ಮಾದರಿಯಾಗಿದೆ. ಕನ್ನಡ ನಾಡು, ನುಡಿ, ಸಂಸ್ಕೃತಿ, ಕನ್ನಡ ಸಮಾಜದ ಕುರಿತು ಅತ್ಯಂತ ಕಾಳಜಿಯಿಂದ ಅಧ್ಯಯನ ಮಾಡುವ ಮೂಲಕ ಸಾರ್ವಜನಿಕರಲ್ಲೂ ಕನ್ನಡದ ಪ್ರಜ್ಞೆ ಬೆಳೆಸುತ್ತಿದೆ. ಜತೆಗೆ ಬಡವರು, ರೈತ, ಕೂಲಿ ಕಾರ್ಮಿಕ, ದಲಿತ, ಹಿಂದುಳಿದ ವರ್ಗಗಳ ಮೊದಲ ತಲೆಮಾರಿನ ಮಕ್ಕಳನ್ನು ಸಂಶೋಧಕರನ್ನಾಗಿ ರೂಪಿಸುವ ಕೆಲಸವನ್ನು ಮಾಡುತ್ತಿದೆ.
ಆದರೆ, ಇಂತಹ ವಿಶ್ವವಿದ್ಯಾಲಯದ ಬಗ್ಗೆ ಮುರಳಿ ಕೃಷ್ಣ ಮದ್ದಿಕೇರಿ ಎಂಬುವವರು ತಮ್ಮ ಫೇಸ್‌ಬುಕ್‌ನಲ್ಲಿ ನಗರ ನಕ್ಸಲ್ಲರನ್ನು ಸೃಷ್ಟಿಸುವ ಕೇಂದ್ರವೆAದು ಇಲ್ಲಸಲ್ಲದ ಆರೋಪ ಮಾಡಿದ್ದಾರೆ. ಈ ಮೂಲಕ ಕನ್ನಡ ವಿಶ್ವವಿದ್ಯಾಲಯದ ಘನತೆಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿದರು.
ಕನ್ನಡ ವಿಶ್ವವಿದ್ಯಾಲಯವನ್ನು ನಕ್ಸಲರನ್ನು ಸೃಷ್ಟಿ ಮಾಡುವ ಕೇಂದ್ರ ವಿಶ್ವವಿದ್ಯಾಲಯದ ಘನತೆಗೆ ಧಕ್ಕೆ ತಂದಿರುವ ಕನ್ನಡ ವಿರೋಧಿ, ಕೋಮುವಾದಿ ಮುರಳಿ ಕೃಷ್ಣ ಮದ್ದಿಕೇರಿ ಮೇಲೆ ಕೂಡಲೇ ಸರ್ಕಾರ ಸು ಮೋಟೋ ಕೇಸ್ ದಾಖಲಿಸಿ ಬಂಧಿಸಿ ಕಾನೂನು ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ವಿವಿಯ ಸಂಶೋಧನಾರ್ಥಿಗಳಾದ ಡಾ.ಸಂದೀಪ್, ವಿರೂಪಾಕ್ಷಿ, ಬಸವರಾಜ್, ಮಣಿಕಂಠ, ಹನುಮಂತರಾಯ, ಗಿರೀಶ್ ಕುಮಾರ್ ಗೌಡ, ರಾಹುಲ್, ಲಕ್ಷ್ಮಣ, ಆಶಾ, ಜಿ.ಬಿ ಸಾವಿತ್ರಿ, ಉಮ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net