ತೋಟಗಾರಿಕೆ ಇಲಾಖೆಗೆ 5 ಲಕ್ಷ ರೂ. ಆದಾಯ, ಆಫ್ ಸೀಸನ್ ಮಾವು ಮಾರಾಟ

mango
Published on

- ಅವಿನ್ ಶೆಟ್ಟಿ ಉಡುಪಿ

ಲಾಕ್‌ಡೌನ್ ಪರಿಣಾಮ ಹಲವು ವಲಯಗಳು ಆದಾಯವಿಲ್ಲದೆ, ನಷ್ಟ ಅನುಭವಿಸಿವೆ. ಆದರೆ, ಕೃಷಿ, ತೋಟಗಾರಿಕೆ ಉತ್ಪನ್ನಗಳಿಗೆ ಸರಿಯಾದ ಮಾರುಕಟ್ಟೆ ವ್ಯವಸ್ಥೆ ಇಲ್ಲದ ದಿನಗಳಲ್ಲೂ ಉಡುಪಿ ತೋಟಗಾರಿಕೆ ಇಲಾಖೆ ಆಫ್ ಸೀಸನ್ ಮಾವು ಬೆಳೆಯ ಮೂಲಕ 5.03 ಲಕ್ಷ ರೂ.ಆದಾಯ ಗಳಿಸಿದೆ.

ಕರಾವಳಿ ಕೃಷಿಕರಿಗೆ ಮಾವು ಪ್ರಮುಖ ಆದಾಯದ ಬೆಳೆಯಲ್ಲದಿದ್ದರೂ ಹಲವು ವರ್ಷಗಳಿಂದ ದೊಡ್ಡ ಮತ್ತು ಸಣ್ಣ ರೈತರು ಇಷ್ಟಪಟ್ಟು ಮಾವು ಬೆಳೆಯುತ್ತಿದ್ದಾರೆ. ಸಮಗ್ರ ಕೃಷಿ ಪದ್ಧತಿಯಲ್ಲಿ ಇದು ಕಿರು ಆದಾಯದ ಮೂಲವಾಗಿದೆ. ವಿಶೇಷವಾಗಿ ತೋಟಗಾರಿಕೆ ಇಲಾಖೆ ಆರೈಕೆ ಮಾಡಿ, ಬೆಳೆಸಿದ ಮರಗಳು ಈಗ ಉತ್ತಮ ಆದಾಯ ತಂದುಕೊಡುತ್ತಿವೆ ಎನ್ನುತ್ತಾರೆ ಅಧಿಕಾರಿಗಳು.

ಜಿಲ್ಲೆಯಲ್ಲಿ 6 ತೋಟಗಾರಿಕೆ ಕ್ಷೇತ್ರಗಳಿವೆ. ಸಮೃದ್ಧ ತೋಟಗಾರಿಕೆ ವಲಯವಾಗಿ ರೂಪುಗೊಂಡಿದೆ. ಮಾವು, ತೆಂಗು, ಚಿಕ್ಕು, ಗೇರು, ತರಕಾರಿ ಸಸಿ, ವಾಣಿಜ್ಯ ಸಸಿಗಳ ಉತ್ಪಾದನೆ, ಫಾರ್ಮ್, ರೈತ ಸೇವಾ ಕೇಂದ್ರವನ್ನು ಹೊಂದಿದೆ. ಇದರಲ್ಲಿ ಮಾವು ಉತ್ತಮ ಆದಾಯ ಬೆಳೆಯಾಗಿದೆ. ದೊಡ್ಡಣಗುಡ್ಡೆ ಶಿವಳ್ಳಿಯಲ್ಲಿ 120, ಕುಕ್ಕಂದೂರಲ್ಲಿ 60, ರಾಮಸಮುದ್ರ 12, ಕುಂಭಾಶಿ 18, ಕೆದೂರು 30 ಮಾವಿನ ಮರಗಳು ಫಸಲು ಕೊಡುತ್ತವೆ.

ಎಲ್ಲೆಲ್ಲಿ ಎಷ್ಟು ಆದಾಯ?: ಇಲಾಖೆ ನೇರವಾಗಿ ಮಾರುಕಟ್ಟೆಗೆ, ಗ್ರಾಹಕರಿಗೆ ಮಾರಾಟ ಮಾಡದೆ ಹರಾಜು ನಡೆಸುತ್ತದೆ. ಇದರಿಂದ ಇಲಾಖೆಗೆ ಕಾರ್ಮಿಕರ ಸಮಸ್ಯೆ, ಕೊಯ್ಲು ಪರಿಕರಗಳ ಬಳಕೆ, ಸಾಗಾಟ ವೆಚ್ಚ ಇರುವುದಿಲ್ಲ. ಎಲ್ಲವನ್ನೂ ಗುತ್ತಿಗೆ ಪಡೆದುಕೊಂಡವರೇ ನೋಡಿಕೊಳ್ಳುತ್ತಾರೆ. ಸದ್ಯ ಜಿಲ್ಲೆಯ ಎಲ್ಲ ತೋಟಗಾರಿಕೆ ಕ್ಷೇತ್ರಗಳಲ್ಲಿ ಕೊಯ್ಲು ಪ್ರಕ್ರಿಯೆ ನಡೆಯುತ್ತಿದೆ. ಮಂಗಳೂರಿನ ವ್ಯಾಪಾರಿ ಸಿದ್ದಿಕ್ ಎಂಬವರು ಗುತ್ತಿಗೆ ಪಡೆದುಕೊಂಡಿದ್ದಾರೆ. ದೊಡ್ಡಣಗುಡ್ಡೆ ಕ್ಷೇತ್ರ 1.75 ಲಕ್ಷ ರೂ, ಕುಕ್ಕಂದೂರು 1.42 ಲಕ್ಷ ರೂ, ರಾಮಸಮುದ್ರ 48 ಸಾವಿರ ರೂ, ಕುಂಭಾಶಿ 72 ಸಾವಿರ ರೂ, ಕೆದೂರು 66 ಸಾವಿರ ರೂ.ಗೆ ಮಾವು ಮಾರಾಟವಾಗಿದೆ.

ಫೆಬ್ರವರಿ ಕೊಯ್ಲು ಮೇ ತಿಂಗಳಲ್ಲಿ: ಫೆಬ್ರವರಿ ಮಾರ್ಚ್ ತಿಂಗಳಲ್ಲಿ ಆಗಬೇಕಿದ್ದ ಮಾವಿನ ಕೊಯ್ಲು ಈ ಭಾರಿ ತಡವಾಗಿದೆ. ಕಾರಣ ಈ ವರ್ಷದ ಆಫ್ ಸೀಸನ್ ಮಾವಿನ ಬೆಳೆಗೆ ಹೂ ತಡವಾಗಿದೆ. ಕಳೆದ ವರ್ಷ ಅಕ್ಟೋಬರ್-ಸೆಪ್ಟೆಂಬರ್‌ವರೆಗೂ ಮಳೆಯಾದುದರಿಂದ ಹೊಸ ಚಿಗುರು, ಹೂ ಬರಲು ವಿಳಂಬವಾಗಿದೆ. ಕಾಯಿಬಿಟ್ಟು, ಬೆಳೆಯುವಾಗ ಏಪ್ರಿಲ್ ಆಗಿತ್ತು ಎನ್ನುತ್ತಾರೆ ತೋಟಗಾರಿಕೆ ಅಧಿಕಾರಿಗಳು.

ಮಂಗಳೂರು ಮಾರುಕಟ್ಟೆಗೆ ಪೂರೈಕೆ: ಜಿಲ್ಲೆಯ ತೋಟಗಾರಿಕೆ ಕ್ಷೇತ್ರಗಳಲ್ಲಿ ಅಪೂಸ್, ಕಾಲಪಾಡಿ, ಬಾದಾಮಿ ತಳಿಗಳ ಮಾವು ಬೆಳೆಯಲಾಗುತ್ತದೆ. ಜಿಲ್ಲೆಯ ಮಾವುಗಳಿಗೆ ಮಂಗಳೂರು ಸೆಂಟ್ರಲ್ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇದೆ. ಕಾಲಪಾಡಿ 150 ರೂ, ಅಪೂಸ್‌ಗೆ 150-170 ರೂ, ಬಾದಾಮಿ 100-80 ರೂ.ಪ್ರತಿ ಕೆ.ಜಿಗೆ ಮಾರಾಟ ದರವಿದೆ.

ತೋಟಗಾರಿಕೆ ಇಲಾಖೆಯ ಫಾರ್ಮ್‌ಗಳಲ್ಲಿ ಈ ಬಾರಿಯ ಆಫ್ ಸೀಸನ್‌ನಲ್ಲಿಯೂ ಮಾವು ಬೆಳೆ ಉತ್ತಮವಾಗಿದೆ. ಶಿವಳ್ಳಿ, ಕುಕ್ಕುಂದೂರು ತೋಟಗಾರಿಕೆ ಕ್ಷೇತ್ರದಲ್ಲಿ ಫಸಲು ಹೆಚ್ಚಿದೆ. ಮಂಗಳೂರು ಮೂಲದ ವ್ಯಾಪಾರಿಯೊಬ್ಬರು ಗುತ್ತಿಗೆ ಪಡೆದು, ಸಾಮಾಜಿಕ ಅಂತರ ಕಾಯ್ದುಕೊಂಡು ಕೊಯ್ಲು ಕೆಲಸ ನಡೆಸುತಿದ್ದಾರೆ. ಫಾರ್ಮ್ ಒಳಗೆ ಕಾರ್ಮಿಕರಿಗೆ ಮಾಸ್ಕ್, ಸ್ಯಾನಿಟೈಸರ್ ಕಡ್ಡಾಯ ಮಾಡಲಾಗಿದೆ.

ನಿಧೀಶ್ ಕೆ.ಜೆ, ಸಹಾಯಕ ನಿರ್ದೇಶಕ, ತೋಟಗಾರಿಕೆ ಇಲಾಖೆ ಉಡುಪಿ

ಉಡುಪಿ ಜಿಲ್ಲೆಯ ಮಾವಿಗೆ ಮಂಗಳೂರಲ್ಲಿ ಬೇಡಿಕೆ ಇದೆ. ಮಂಗಳೂರು ಮಾರುಕಟ್ಟೆ ಕೇಂದ್ರೀಕೃತವಾಗಿ ವ್ಯಾಪಾರ ನಡೆಸುತ್ತೇವೆ. ಈ ಸಲ ಇಲಾಖೆಯ ಮಾವು ಬೆಳೆ ಮಾತ್ರ ಲಭ್ಯವಾಗಿದೆ. ಲಾಕ್‌ಡೌನ್‌ನಿಂದಾಗಿ ಮಾವು ಬೆಳೆಗಾರರಿಂದ ಮಾವು ಖರೀದಿ, ಕೊಯ್ಲು ಸಾಧ್ಯ ವಾಗಿಲ್ಲ. ಬೆಳೆಗಾರರಿಗೆ ಮುಂಗಡ ಹಣ ನೀಡಲಾಗಿತ್ತು. ಲಕ್ಷಾಂತರ ರೂ.ನಷ್ಟವಾಗಿದೆ. ಆಫ್ ಸೀಸನ್‌ನಲ್ಲಿಯೂ ತೋಟಗಾರಿಕೆ ಇಲಾಖೆ ಮಾವಿನ ಫಸಲು ಉತ್ತಮವಾಗಿದೆ.

ಸಿದ್ದಿಕ್ ಮಂಗಳೂರು, ಮಾವು ಗುತ್ತಿಗೆ ಪಡೆದುಕೊಂಡವರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net