

ತುಮಕೂರು: ಕರೊನಾ ಸಂಕಷ್ಟದ ಬಳಿಕ ಶಾಲೆ-ಕಾಲೇಜುಗಳು ಹಂತ, ಹಂತವಾಗಿ ಆರಂಭವಾಗುತ್ತಿವೆಯಾದರೂ ವಿದ್ಯಾರ್ಥಿಗಳು ಗ್ರಾಮೀಣ ಸಾರಿಗೆ ಸೇವೆ ದೊರೆಯದೆ ನಿತ್ಯ ಪರದಾಡುವಂತಾಗಿದೆ.
ಜ.1ರಿಂದ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯು ಭೌತಿಕ ತರಗತಿಗಳು ಆರಂಭವಾಗಿದ್ದು ಮಕ್ಕಳು ಶಾಲೆಗಳತ್ತ ಮುಖ ಮಾಡಿದ್ದಾರೆ. ಇದಕ್ಕೂ ಮುನ್ನ ಕಳೆದ ನವೆಂಬರ್ 17ರಿಂದ ಅಂತಿಮ ವರ್ಷದ ಪದವಿ ಕಾಲೇಜುಗಳು ಬಾಗಿಲು ತೆರೆದಿದ್ದವು. ಈಗ ಸೋಮವಾರದಿಂದ ಪ್ರಥಮ, ದ್ವಿತೀಯ ಪದವಿ ಕಾಲೇಜುಗಳು ಆರಂಭವಾಗಿದ್ದು ಬಹುತೇಕ ಶಾಲಾ-ಕಾಲೇಜುಗಳು 10 ತಿಂಗಳ ನಂತರ ಯಥಾಸ್ಥಿತಿಗೆ ಮರಳುತ್ತಿವೆ.
ಕರೊನಾ ಹಿನ್ನೆಲೆಯಲ್ಲಿ ಮಾರ್ಚ್‌ನಲ್ಲಿ ಲಾಕ್‌ಡೌನ್ ಘೋಷಣೆ ಸಂದರ್ಭದಲ್ಲಿ ಸ್ಥಗಿತಗೊಂಡಿದ್ದ ಸಾರಿಗೆ ಬಸ್ ಸೇವೆ ಮೇ 18ರ ನಂತರ ಮರು ಆರಂಭಗೊಂಡಿತಾದರೂ ಬೆರಳೆಣಿಕೆಯಷ್ಟು ಬಸ್‌ಗಳು ರಸ್ತೆಗಿಳಿದ್ದವು. ಜುಲೈ ಹೊತ್ತಿಗೆ ಸಾರಿಗೆ ಸೇವೆ ಮತ್ತೆ ಹಳಿಗೆ ಬಂದಿತ್ತಾದರೂ ಗ್ರಾಮೀಣ ಸಾರಿಗೆ ಸೇವೆಯನ್ನು ಪ್ರಯಾಣಿಕರ ಬೇಡಿಕೆಗನುಗುಣವಾಗಿ ಆರಂಭಿಸಲಾಯಿತು. ವರ್ಷಾರಂಭದಲ್ಲಿ ಶಾಲಾ-ಕಾಲೇಜು ಪ್ರಾರಂಭವಾದ ಬಳಿಕ ಗ್ರಾಮೀಣ ವಿದ್ಯಾರ್ಥಿಗಳ ಓಡಾಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬಸ್ ಇಲ್ಲದಿರುವುದರಿಂದ ಕಳೆದೊಂದು ವಾರದಿಂದ ಪರದಾಡುವಂತಾಗಿದೆ.
ಶೇ.75 ಗ್ರಾಮೀಣ ಸಾರಿಗೆ ಸೇವೆ: ಶಾಲಾ-ಕಾಲೇಜುಗಳು ಆರಂಭವಾದ ಬಳಿಕ ಗ್ರಾಮೀಣ ಸಾರಿಗೆ ಸೇವೆಯನ್ನು ಪ್ರಯಾಣಿಕರ, ಮಕ್ಕಳ ಬೇಡಿಕೆಗನುಗುಣವಾಗಿ ಹೆಚ್ಚಿಸಲಾಗಿದೆ. ಈವರೆಗೆ ಶೇ.75 ಗ್ರಾಮೀಣ ಸಾರಿಗೆ ಬಸ್‌ಗಳು ಸಂಚರಿಸುತ್ತಿವೆ. ಇನ್ನೊಂದು ವಾರದೊಳಗೆ ಶೇ.25 ಸೇವೆ ಆರಂಭಿಸಲಿದ್ದು ಇದರಿಂದ ಗ್ರಾಮೀಣ ವಿದ್ಯಾರ್ಥಿಗಳು ತಾಲೂಕು ಕೇಂದ್ರ, ಜಿಲ್ಲಾ ಕೇಂದ್ರಗಳಲ್ಲಿನ ಕಾಲೇಜುಗಳಿಗೆ ಬರಲು ಅನುಕೂಲವಾಗಲಿದೆ ಎನ್ನಲಾಗಿದೆ.
ಗುಬ್ಬಿ, ಕೊರಟಗೆರೆ, ಶಿರಾ, ಕುಣಿಗಲ್ ಭಾಗದಿಂದ ವಿದ್ಯಾರ್ಥಿಗಳು ತುಮಕೂರು ವಿವಿಯ ಕಾಲೇಜುಗಳಿಗೆ ಪದವಿ, ಸ್ನಾತಕ ಪದವಿ ತರಗತಿಗಳಿಗೆ ಬರಲಿದ್ದು ಗ್ರಾಮೀಣ ಸಾರಿಗೆ ಸೇವೆ ನೆಚ್ಚಿಕೊಂಡಿದ್ದಾರೆ. ಕಡಿಮೆ ಸಂಖ್ಯೆಯಲ್ಲಿ ಬಸ್ ಓಡಾಡುತ್ತಿರುವುದರಿಂದ ಸಮಸ್ಯೆಯಾಗಿದ್ದು, ಖಾಸಗಿ ಬಸ್‌ಗಳನ್ನು ಅವಲಂಬಿಸುವಂತಾಗಿದೆ.
68 ಸಾವಿರ ವಿದ್ಯಾರ್ಥಿ ಬಸ್ ಪಾಸ್ ! : ಜಿಲ್ಲೆಯಲ್ಲಿ 68 ಸಾವಿರ ವಿದ್ಯಾರ್ಥಿಗಳು ಈ ಹಿಂದೆ ಬಸ್ ಪಾಸ್ ಸೇವೆ ಪಡೆಯುತ್ತಿದ್ದು ಜ.1 ರಿಂದ ಶಾಲಾ-ಕಾಲೇಜುಗಳು ಆರಂಭವಾದ ಬಳಿಕ ಈವರೆಗೆ 1862 ವಿದ್ಯಾರ್ಥಿಗಳು ಮಾತ್ರ ಬಸ್ ಪಾಸ್ ಪಡೆದುಕೊಂಡಿದ್ದಾರೆ. ಸಕಾಲದಲ್ಲಿ 5 ಸಾವಿರ ಅರ್ಜಿಗಳು ಬಸ್ ಪಾಸ್ ಕೋರಿ ಸಲ್ಲಿಕೆಯಾಗಿವೆ.
ಶಾಲಾ-ಕಾಲೇಜುಗಳು ಆರಂಭವಾದ ಬಳಿಕ ಗ್ರಾಮೀಣ ಸಾರಿಗೆ ಬಸ್ ಸೇವೆಯನ್ನು ಹೆಚ್ಚಿಸಲಾಗಿದೆ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಈ ಹಿಂದಿನ ಎಲ್ಲ ಮಾರ್ಗಗಳ ಬಸ್ ಕಾರ್ಯಾಚರಣೆಯನ್ನು ಮರು ಆರಂಭಿಸಲಾಗುವುದು. ಈಗಾಗಲೇ ಶೇ.75ರಷ್ಟು ಬಸ್‌ಗಳು ರಸ್ತೆಗಿಳಿದಿವೆ. ಕೆ.ಆರ್.ಬಸವರಾಜು, ವಿಭಾಗೀಯ ನಿಯಂತ್ರಣಾಧಿಕಾರಿ, ತುಮಕೂರು ವಿಭಾಗ ಗುಬ್ಬಿಗೆ ಓಡಾಡಲಿಕ್ಕೆ ಮಕ್ಕಳಿಗೆ ಸಾರಿಗೆ ಬಸ್ ಇಲ್ಲವಾಗಿದೆ. ಕರೊನಾ ಬಳಿಕ ಬಹುತೇಕ ರೂಟ್‌ಗಳನ್ನು ರದ್ದುಗೊಳಿಸಲಾಗಿದೆ. ಈಗ ಮಕ್ಕಳ ಓಡಾಟಕ್ಕೆ ಬಸ್ ಇಲ್ಲದೇ ಪರದಾಡುವಂತಾಗಿದೆ. ನಾವೇ ಮಕ್ಕಳನ್ನು ಸ್ವಂತ ವಾಹನಗಳಲ್ಲಿ ಕರೆದುಕೊಂಡು ಹೋಗಬೇಕು. ಸಂಬಂಧಪಟ್ಟ ಸಾರಿಗೆ ಅಧಿಕಾರಿಗಳು ತಕ್ಷಣ ಈ ಬಗ್ಗೆ ಕ್ರಮವಹಿಸಬೇಕು. ಟಿ.ವಿ.ಸಿದ್ದಲಿಂಗಯ್ಯ, ತ್ಯಾಗಟೂರು