

ಸೋಮವಾರಪೇಟೆ: ಟೀಮ್ 12 ಆಫ್ ರೋಡರ್ಸ್ ವತಿಯಿಂದ ತಾಲೂಕಿನ ಬೆಟ್ಟದಳ್ಳಿ ಗ್ರಾಮ ಪಂಚಾಯಿತಿಯ ಗ್ರಾಮೀಣ ಭಾಗದ ಖಾಸಗಿ ಜಮೀನಿನಲ್ಲಿ ‘ನಮ್ಮ ಭೂಮಿ ನಮ್ಮ ಹಕ್ಕು’ ಶೀರ್ಷಿಕೆಯಡಿ ಆಯೋಜಿಸಿದ್ದ ಆಫ್‌ರೋಡ್ ರ‌್ಯಾಲಿ ಗ್ರಾಮೀಣ ಜನರನ್ನು ರಂಜಿಸಿತು.
ಶಾಂತಳ್ಳಿ ಶ್ರೀ ಕುಮಾರಲಿಂಗೇಶ್ವರ ದೇವಾಲಯ ಆವರಣದಿಂದ ರ‌್ಯಾಲಿಗೆ ಚಾಲನೆ ಸಿಕ್ಕಿತು. ಬೆಂಕಳ್ಳಿ ಗ್ರಾಮದಲ್ಲಿ ಖಾಸಗಿ ಜಾಗದ ಟ್ರ್ಯಾಕ್‌ನಲ್ಲಿ ಜೀಪ್ ತೆರಳುತ್ತಿದ್ದಂತೆ ಧಾರಾಕಾರ ಮಳೆ ಸುರಿಯಲು ಪ್ರಾರಂಭಿಸಿತು. ಕಡಿದಾದ ರಸ್ತೆಯಲ್ಲಿ ಅನೇಕ ವಾಹನಗಳು ಸಿಲುಕಿಕೊಂಡವು. ನಂತರ ಟ್ರಾೃಕ್ಟರ್ ಮತ್ತು ಕ್ರೇನ್ ಬಳಸಿ ವಾಹನಗಳನ್ನು ಟ್ರಾೃಕ್‌ಗಳಿಗೆ ತರಲಾಯಿತು.
ಗ್ರಾಮದ ರಸ್ತೆಯಲ್ಲಿ ಸಾಗುತ್ತಿದ್ದ ತರೆವಾರಿ ವಾಹನಗಳನ್ನು ಕಂಡು ಗ್ರಾಮಸ್ಥರು ಪುಳುಕಿತಗೊಂಡರು. ವಿಚಿತ್ರವಾದ ಶಬ್ದವನ್ನು ಹೊರಸೂಸುತ್ತ ವೇಗವಾಗಿ ಸಂಚರಿಸುವ ವಾಹನಗಳನ್ನು ಕಂಡು ಮಕ್ಕಳು ಶಿಳ್ಳೆ ಹೊಡೆದು ಸಂಭ್ರಮಿಸಿದರು. ಜೀಪನ್ನು ಚಲಾಯಿಸುತ್ತಿದ್ದ ಮಹಿಳೆಯರನ್ನು ಕಂಡ ಗ್ರಾಮದ ಮಹಿಳೆ, ಪುರುಷರು, ಮಕ್ಕಳು, ವೃದ್ಧರು ಆಶ್ಚರ್ಯ ಚಕಿತರಾಗಿ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು.
ಅತೀ ಹೆಚ್ಚು ಮಳೆಬೀಳುವ ಕುಡಿಗಾಣ, ಕೊತ್ತನಳ್ಳಿ ಗ್ರಾಮದ ಖಾಸಗಿ ಜಾಗದ ಕಾಫಿ, ಏಲಕ್ಕಿ ತೋಟಗಳ ಕಚ್ಚಾರಸ್ತೆಯಲ್ಲಿ ತೆರಳುವುದು ಚಾಲಕರಿಗೆ ಸವಾಲಾಗಿ ಪರಿಣಮಿಸಿತು. ಮಳೆಯಿಂದ ಕೆಲ ಸ್ಥಳದಲ್ಲಿ ವಾಹನಗಳು ಹೂತುಕೊಂಡವು. ಕೆಲವರು ಕೆಸರಿನ ನೀರಲ್ಲಿ ಒದ್ದಾಡಿ, ಮೇಲೆ ಬರಲು ಹರಸಾಹಸಪಟ್ಟರು. ರಾಜ್ಯದ ವಿವಿಧ ಭಾಗಗಳಿಂದ 125 ವಾಹನಗಳಲ್ಲಿ 250ರಷ್ಟು ಸ್ಪರ್ಧಿಗಳು ಭಾಗವಹಿಸಿದ್ದರು. ಗ್ರಾಮೀಣ ಭಾಗದಲ್ಲಿ ಆಯೋಜಿಸಿದ್ದ ಆಫ್‌ರೋಡ್ ರ‌್ಯಾಲಿ ಗ್ರಾಮೀಣ ಜನರು ಹಾಗೂ ಸಾಹಸ ಪ್ರೀಯರಿಗೆ ಸಖತ್ ಖುಷಿಕೊಟ್ಟಿತು.
ಹೊರ ರಾಜ್ಯ ಹಾಗೂ ಜಿಲ್ಲೆಯವರು ಕೊಡಗಿನ ಪ್ರಕೃತಿಯ ಸೌಂದರ್ಯ ಸವಿಯಲು ಈ ರ‌್ಯಾಲಿಯನ್ನು ಆಯೋಜಿಸಲಾಗಿದೆ. ಗ್ರಾಮೀಣ ಜನರು ತಮ್ಮ ಕೃಷಿ ಭೂಮಿಗೆ ತೆರಳಲು ಸರಿಯಾದ ರಸ್ತೆ ಸಮಸ್ಯೆ ಎದುರಿಸುತ್ತಿದ್ದರು. ರ‌್ಯಾಲಿ ಸಂದರ್ಭದಲ್ಲಿ ಅನೇಕ ರಸ್ತೆಗಳನ್ನು ಮಾಡಿಕೊಡಲಾಗಿದೆ. ಇದರಿಂದ ಗ್ರಾಮಸ್ಥರು ಆಫ್‌ರೋಡ್ ರ‌್ಯಾಲಿ ನಡೆಸಲು ಸಹಕಾರ ನೀಡುತ್ತಾಬಂದಿದ್ದಾರೆ. ಪ್ರಕೃತಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಟೀಮ್ 12 ಆಫ್ ರೋಡರ್ಸ್ ಅಧ್ಯಕ್ಷ ಹಿರಿಕರ ಉದಯ್ ಕುಮಾರ್ ಹೇಳಿದರು.
ಕೊಡಗು ಪ್ರವಾಸೋದ್ಯಮದಲ್ಲಿ ಬೆಳೆಯಬೇಕು. ಅದರಲ್ಲೆ ಕೊಡಗಿನ ಅಭಿವೃದ್ಧಿ ಕಾಣಬೇಕಿದೆ. ಕೊಡಗಿನ ಪ್ರಕೃತಿ ಸೌಂದರ್ಯ ಕಣ್ತುಂಬಿಕೊಳ್ಳಲು ಹೊರ ಜಿಲ್ಲೆ, ಹೊರ ರಾಜ್ಯ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ. ಕೊಡಗಿನ ಪ್ರಕೃತಿ ಸೌಂದರ್ಯದ ಬಗ್ಗೆ ಹೆಚ್ಚಿನ ಪ್ರಚಾರದ ಅಗತ್ಯ ಇದೆ. ಆಫ್‌ರೋಡ್‌ನಂತಹ ಸ್ಪರ್ಧೆಗಳ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಮತ್ತು ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗಿ ಪ್ರವಾಸಿಗರನ್ನು ಆಕರ್ಷಿಸಲು ಸಹಕಾರಿ ಆಗುತ್ತದೆ ಎಂದು ಟೀಮ್ 12 ಉಪಾಧ್ಯಕ್ಷ ಎಂ.ಪಿ.ರವಿ ಹೇಳಿದರು.
ಸಿ ಆ್ಯಂಡ್ ಡಿ ಜಾಗದಲ್ಲಿ ರ‌್ಯಾಲಿಗೆ ತಡೆ: ಪುಷ್ಪಗಿರಿ ಅರಣ್ಯ ಪ್ರದೇಶದಲ್ಲಿ ಆಫ್‌ರೋಡ್ ರ‌್ಯಾಲಿ ನಡೆಸದಂತೆ ಕೊತ್ನಳ್ಳಿ ಗ್ರಾಮದ ಕೆ.ಪಿ.ಅಜಿತ್ ಎಂಬವರು ಹೈಕೋರ್ಟ್‌ನಲ್ಲಿ ರಿಟ್ ಪಿಟಿಷನ್ ಹಾಕಿರುವುದರಿಂದ, ಇದರ ಮಾಹಿತಿ ಪಡೆದ ಅರಣ್ಯ ಇಲಾಖೆ ಮತ್ತು ತಾಲೂಕು ಆಡಳಿತ ಬಂದೋಬಸ್ತ್ ಕಲ್ಪಿಸಿತ್ತು. ಬೆಳಗ್ಗೆ 8ಗಂಟೆಯಿಂದ 10ಗಂಟೆಯ ತನಕ ಶಾಂತಳ್ಳಿ ಜಂಕ್ಷನ್‌ನಿಂದ ಆಫ್‌ರೋಡ್ ವಾಹನಗಳು ತೆರಳದಂತೆ ಅರಣ್ಯ ಇಲಾಖೆ, ಪೊಲೀಸ್ ಹಾಗೂ ತಾಲೂಕು ಆಡಳಿತ ತಡೆ ಹಾಕಿತು. ಅರಣ್ಯ ಹಾಗೂ ಸಿ ಆಂ್ಯಡ್ ಡಿ ಜಾಗದೊಳಗೆ ಆಫ್ ರೋಡ್ ವಾಹನಗಳು ತೆರಳಲು ಅವಕಾಶವಿಲ್ಲ ಎಂದು ಎಸಿಎಫ್ ಗೋಪಾಲ್, ತಹಸೀಲ್ದಾರ್ ಕೃಷ್ಣಮೂರ್ತಿ, ಇನ್‌ಸ್ಪೆಕ್ಟರ್ ಮುದ್ದು ಮಹಾದೇವ ಹೇಳಿದರು. ಈ ನಡುವೆ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಹರಪಳ್ಳಿ ರವೀಂದ್ರ, ಕೊತ್ನಳ್ಳಿ ಅರುಣ್, ಕೆ.ಎಂ.ಲೋಕೇಶ್, ಎಸ್.ಜಿ.ಮೇದಪ್ಪ ಅವರು ಮತ್ತು ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು. ಖಾಸಗಿ ಜಾಗದಲ್ಲಿ ವಾಹನಗಳು ತೆರಳಲು ಡಿಎಫ್‌ಒ ಅವರಿಂದ ಅನುಮತಿ ಪತ್ರ ಸಿಕ್ಕರೆ ಮಾತ್ರ ವಾಹನವನ್ನು ಬಿಡುತ್ತೇವೆ ಎಂದು ಎಸಿಎಫ್ ಗೋಪಾಲ್ ಹೇಳಿದರು. ಸತೀಶ್, ಕೆ.ಬಿ.ಚಂಗಪ್ಪ, ಎಂ.ಟಿ.ಮನುಕುಮಾರ್, ಎನ್.ಎ.ಲಿಂಗರಾಜು, ಎಂ.ಟಿ.ದಿನೇಶ್, ಪಿ.ಕೆ.ರವಿ ಅವರ ಜಾಗದಲ್ಲಿ ಆಫ್‌ರೋಡ್ ವಾಹನಗಳು ತೆರಳಲು ಡಿಎಫ್‌ಓ ವಿ.ಅಭಿಷೇಕ್ ಅನುಮತಿ ನೀಡಿದ ನಂತರ ಅಧಿಕಾರಿಗಳು ವಾಹನಗಳನ್ನು ಬಿಟ್ಟರು