

ಶಿವಮೊಗ್ಗ: ಕಾಂಗ್ರೆಸ್‌ನ ಒಡೆದು ಆಳುವ ಮತ್ತು ತುಷ್ಠೀಕರಣ ನೀತಿ ಪ್ರತಿಬಿಂಬವೇ ವಕ್ಫ್ ಮಸೂದೆ. ಅದೊಂದು ಕರಾಳ ಶಾಸನ ಆಗಿದ್ದು, ರೈತರು, ದೇವಸ್ಥಾನ, ಮಠಮಂದಿರಗಳ ಭೂಮಿಯನ್ನು ತನ್ನ ಆಸ್ತಿಯಾಗಿ ಮಾಡಿಕೊಂಡಿರುವ ಕ್ರಮ ಖಂಡಿಸಿ ನ. 22ರಂದು ಇಡೀ ದಿನ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಹೇಳಿದರು.
ಸಮಾಜದಲ್ಲಿರುವ ಅಶಾಂತಿ ಉಂಟು ಮಾಡುತ್ತಿರುವ ಶಾಸನಕ್ಕೆ ತಿದ್ದುಪಡಿ ಅವಶ್ಯಕ. ವಕ್ಫ್ ಬೋರ್ಡ್‌ಗೆ ನೀಡಿರುವ ಪರಮಾಧಿಕಾರವನ್ನು ರಾಜ್ಯ ಸರ್ಕಾರ ಕೈ ಬಿಡಬೇಕು ಎಂಬ ಒತ್ತಾಯದ ಮೂಲಕ ಗಂಜಿ ಕೇಂದ್ರದೊಂದಿಗೆ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿದ್ದ ಸಮಸ್ಯೆ ಇದೀಗ ಶಿವಮೊಗ್ಗಕ್ಕೂ ಕಾಲಿಟ್ಟಿದೆ. ವಕ್ಫ್ ಆಸ್ತಿ ಮಾಡಿರುವುದಾಗಿ ಜಿಲ್ಲೆಯಲ್ಲಿ 32 ಅರ್ಜಿಗಳು ಡಿಸಿ ಕಚೇರಿ ಕಾರ್ಯಾಲಯ ತಲುಪಿವೆ. ತರಾತುರಿಯಲ್ಲಿ ದಾಖಲೆಗಳು ತಿದ್ದುಪಡಿ ಆಗುತ್ತಿದ್ದು, ಇದಕ್ಕೆ ಸಚಿವ ಜಮೀರ್ ಅಹಮ್ಮದ್ ಖಾನ್ ಅವರೇ ನೇರ ಕಾರಣ. ಸಿಎಂ ನಿರ್ದೇಶನ, ಸೂಚನೆಯಂತೆ ವಕ್ಫ್ ಅದಾಲತ್ ಮಾಡಲಾಗುತ್ತಿದೆ. ದಾಖಲಾತಿಯಲ್ಲಿ ವಕ್ಫ್ ಎಂದು ನಮೂದು ಮಾಡಿರುವುದಾಗಿ ಜಮೀರ್ ಅವರೇ ತಿಳಿಸಿದ್ದಾರೆ ಎಂದು ಕಿಡಿಕಾರಿದರು.
ಭೂ ಮಾಲೀಕರು ಸ್ಥಿರತೆ, ನೆಮ್ಮದಿ ಕಳೆದುಕೊಂಡಿದ್ದಾರೆ. ಇದಕ್ಕೆ ಕಾರಣರಾದ ಜಮೀರ್ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು. ಗೃಹ ಇಲಾಖೆ ಜೀವಂತವಿದ್ದರೆ ಸುಮೋಟೊ ಕೇಸ್ ದಾಖಲಿಸಬೇಕು. ಮೊದಲೇ ಭ್ರಷ್ಟಾಚಾರದ ಕೇಂದ್ರವಾಗಿದ್ದ ವಕ್ಫ್ ಮಂಡಳಿ ಇದೀಗ ಊರಿಗೆ ಊರನ್ನೇ ಕಬಳಿಸುವ ಹುನ್ನಾರ ನಡೆಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಆದೇಶದಂತೆ ರಾಜ್ಯಾದ್ಯಂತ ನ. 21 ಹಾಗೂ 22ರಂದು ಡಿಸಿ ಕಚೇರಿ ಮತ್ತು ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಲಾಗುತ್ತಿದೆ. ಎರಡನೇ ಹಂತದಲ್ಲಿ ಬಿ.ವೈ.ವಿಜಯೇಂದ್ರ, ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಚಲವಾದಿ ನಾರಾಯಣಸ್ವಾಮಿ ಅವರ ನೇತೃತ್ವದ ತಂಡ ಜಿಲ್ಲಾ ಕೇಂದ್ರಕ್ಕೆ ಭೇಟಿ ನೀಡಲಿದ್ದು, ಸ್ಥಳೀಯ ಹೋರಾಟಕ್ಕೆ ಸಾಥ್ ನೀಡುವರು ಎಂದರು.
ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಶಿವರಾಜ್, ಎಸ್.ಜ್ಞಾನೇಶ್ವರ್, ಎಂ.ಬಿ.ಹರಿಕೃಷ್ಣ, ಸಂತೋಷ್ ಬಳ್ಳೆಕೆರೆ, ಎನ್.ಕೆ.ಜಗದೀಶ್, ಪ್ರಭಾಕರ್, ಹರೀಶ್ ನಾಯ್ಕ ಸುದ್ದಿಗೋಷ್ಠಿಯಲ್ಲಿದ್ದರು.