

ಸಂಕೇಶ್ವರ: ಕೃಷಿ ಕ್ಷೇತ್ರದಲ್ಲಿ ಹೊಸ-ಹೊಸ ಅವಿಷ್ಕಾರಗಳು ನಡೆದಿವೆ. ರೈತರು ಅವುಗಳ ಲಾಭ ಪಡೆದು ಇಳುವರಿ ಹೆಚ್ಚಿಸಿಕೊಳ್ಳಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಆರ್.ಬಿ.ನಾಯ್ಕರ ಹೇಳಿದರು.
ಸಮೀಪದ ಅಮ್ಮಿನಬಾವಿಯಲ್ಲಿ ಸ್ವಾಭಿಮಾನ ಆತ್ಮ ರೈತ ಅಭಿವೃದ್ಧಿ ಸಂಘದಿಂದ ಈಚೆಗೆ ಹಮ್ಮಿಕೊಂಡಿದ್ದ ಕೀಟನಾಶಕ ಸಿಂಪಡಿಸುವ ಯಂತ್ರಕ್ಕೆ ಚಾಲನೆ ನೀಡಿ ಮಾತನಾಡಿ, ಈ ಕೀಟನಾಶಕ ಸಿಂಪಡಿಸುವ ಯಂತ್ರ ಏಕಕಾಲಕ್ಕೆ 4 ಸಾಲುಗಳಲ್ಲಿ ಸ್ವಯಂ ಕೀಟನಾಶಕ ಸಿಂಪಡಿಸುತ್ತದೆ. ಕೃಷಿ ಇಲಾಖೆಯಿಂದ ಬಿತ್ತನೆ ಬೀಜ, ಕೀಟನಾಶಕ, ಲಘು ಪೋಷಕಾಂಶ, ಹನಿ ಮತ್ತು ತುಂತುರು ನೀರಾವರಿ ಸೌಲಭ್ಯಗಳನ್ನು ರಿಯಾಯಿತಿ ದರದಲ್ಲಿ ರೈತರಿಗೆ ಒದಗಿಸಲಾಗುತ್ತಿದೆ. ಇವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಸಹಾಯಕ ತೋಟಗಾರಿಕೆ ನಿರ್ದೇಶಕ ಟಿ.ಎ.ನಾಂದಣಿ ಮಾತನಾಡಿ, ತೋಟಗಾರಿಕೆ ಇಲಾಖೆಯಿಂದ ಹೂವು, ಹಣ್ಣು ಹಾಗೂ ತರಕಾರಿ ಬೆಳೆಗಾರರಿಗೆ ವಿವಿಧ ಸೌಲಭ್ಯ ನೀಡಲಾಗುತ್ತಿದೆ ರೈತರು ಅವುಗಳ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ಕೃಷಿ ಇಲಾಖೆಯ ತಾಲೂಕು ತಾಂತ್ರಿಕ ವ್ಯವಸ್ಥಾಪಕ ಸಮೀರ್ ಲೋಕಾಪುರ, ಸಹಾಯಕ ತಾಂತ್ರಿಕ ವ್ಯವಸ್ಥಾಪಕಿ ಕಾದಂಬರಿ ಪಾಟೀಲ, ಶ್ರದ್ಧಾ ಪಾಟೀಲ, ಸಹಕಾರಿ ಧುರೀಣ ಪರಗೌಡ ಪಾಟೀಲ, ನಿರಂಜನ ಪಾಟೀಲ, ಸ್ವಾಭಿಮಾನ ಆತ್ಮಾ ರೈತ ಅಭಿವೃದ್ಧಿ ಸಂಘದ ಅಧ್ಯಕ್ಷ ಬಸವರಾಜ ಹುಣಚಾಳಿ, ಅಪ್ಪಾಸಾಹೇಬ ನಿರಲಕಟ್ಟಿ, ಸಂಚಾಲಕ ಆಸೀಫ್ ಮುಲ್ಲಾ, ಬಸಪ್ಪ ಹುಣಚಾಳಿ, ರಾಮಪ್ಪ ಮಗದುಮ್, ದುಂಡಪ್ಪ ಖಂಡುಗೋಳ, ಬಾಳಪ್ಪ ಹುಣಚಾಳಿ ಇತರರಿದ್ದರು.