

ಹಗರಿಬೊಮ್ಮನಹಳ್ಳಿ: ಹೆಚ್ಚುತ್ತಿರುವ ತಾಪಮಾನ, ಅಕಾಲಿಕ ಮಳೆ, ನೈಸರ್ಗಿಕ ವಿಕೋಪಗಳ ನಿಯಂತ್ರಿಸಲು ಪ್ರತಿಯೊಬ್ಬರೂ ಪರಿಸರ ಕಾಳಜಿ ವಹಿಸಬೇಕಿದೆ ಎಂದು ತಹಸೀಲ್ದಾರ್ ಚಂದ್ರಶೇಖರ ಶಂಬಣ್ಣ ಗಾಳಿ ಹೇಳಿದರು.
ಪಟ್ಟಣದ ತಾಲೂಕು ಆಡಳಿತ ಸೌಧದ ಮುಂದೆ ತಾಲೂಕಾಡಳಿತ ಹಾಗೂ ಪ್ರಾದೇಶಿಕ ಅರಣ್ಯ ಇಲಾಖೆ ಮತ್ತು ಸಾಮಾಜಿಕ ಅರಣ್ಯ ಇಲಾಖೆ ಏರ್ಪಡಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪರಿಸರ ನಾಶದಿಂದ ಸಕಾಲಕ್ಕೆ ಮಳೆಯಾಗದೆ ಅನಾವೃಷ್ಟಿ, ಅತಿವೃಷ್ಟಿ, ಭೂಕಂಪನಗಳು ಹೆಚ್ಚುತ್ತಿವೆ. ಅರಣ್ಯ ಪ್ರದೇಶಗಳ ವಿನಾಶದಿಂದ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಕೈಗಾರಿಕೆಗಳು ಹೊರಸೂಸುವ ವಿಷಾನಿಲ, ವಿಷಪೂರಿತ ನೀರು ಪ್ರಕೃತಿ ಮೇಲೆ ದುಷ್ಪಾರಿಣಾಮ ಉಂಟಾಗಲಿದೆ. ಪ್ರತಿಯೊಬ್ಬರೂ ಗಿಡಗಳನ್ನು ನೆಟ್ಟು ಪೋಷಿಸಬೇಕಿದೆ ಎಂದರು.
ಉಪತಹಸೀಲ್ದಾರ್ ಶಿವಕುಮಾರ್‌ಗೌಡ, ವಲಯ ಅರಣ್ಯಧಿಕಾರಿ ಕೆ.ಎಂ.ನಾಗರಾಜ, ಉಪವಲಯರಣ್ಯಾಧಿಕಾರಿಗಳಾದ ಅಡವಿಹಳ್ಳಿ ಕರಿಬಸಪ್ಪ, ಮಂಜುನಾಯ್ಕ, ಅರಣ್ಯ ರಕ್ಷಕರಾದ ಲೀಲಾವತಿ, ಮಲ್ಲಿಕಾರ್ಜುನ ಸ್ವಾಮಿ, ಪ್ರಮುಖರಾದ ಪೂಜಾರ ಸಿದ್ದಪ್ಪ ಇತರರಿದ್ದರು.