

ಮಂಗಳೂರು : ಒಡಿಯೂರು ಶ್ರೀ ವಿವಿಧೋದ್ಧೇಶ ಸೌಹಾರ್ದ ಸಹಕಾರಿ ಸಂಘದ ಮಹಾ ಸಭೆ ಶ್ರೀ ಗುರುದೇವಾನಂದ
ಸ್ವಾಮೀಜಿಯ ಉಪಸ್ಥಿತಿಯಲ್ಲಿ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಜ್ಞಾನ ಮಂದಿರದಲ್ಲಿ ನಡೆಯಿತು.
ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಮಾತನಾಡಿ ‘ ತಾನು ಬದುಕುವ ಜತೆಗೆ ಹಲವರಿಗೆ ಬದುಕು ಕಲ್ಪಿಸುವ ಕಾರ್ಯ ನಡೆಯಬೇಕು. ಸೇವಾ ಮನೋಭಾವ ಇದ್ದಾಗ ಸಂಘಟನೆಯ ಜತೆ ನಾವು ಬೆಳೆಯಬಹುದು.ಬದುಕಿನಲ್ಲಿ ಸೌಹಾರ್ದ ಮತ್ತು ಸಹಕಾರ ಜತೆ ಜತೆಯಾಗಿರಬೇಕು ಎಂದರು.
ಸಂಘದ ಶಾಖೆಗಳು ಬೆಳೆದಂತೆ ಬೇರುಗಳು ಸದೃಢವಾಗುತ್ತದೆ. ಗ್ರಾಹಕರು ಸಹಕಾರಿಯ ಜೀವಾಳವಾಗಿದ್ದು, ನಿಸ್ವಾರ್ಥತೆಯಿಂದ ಕೆಲಸ ಮಾಡುವ ನಿರ್ದೇಶಕ ಮಂಡಳಿ ಸೇವಾ ಮನೋಭಾವದಿಂದ ತೊಡಗಿರುವ ಸಿಬ್ಬಂದಿಯಿಂದ ಸಹಕಾರ ಸಂಸ್ಥೆ ಉನ್ನತಿಗೇರಲು ಸಾಧ್ಯವಾಗಿದೆ ಎಂದು ಅವರು ಹೇಳಿದರು. ಸಾಧ್ವಿ ಶ್ರೀ ಮಾತಾನಂದಮಯಿ ಸಾನಿಧ್ಯ ವಹಿಸಿದ್ದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಎ.ಸುರೇಶ್ ರೈ ಮಾತನಾಡಿ ಸಂಘವು 19 ಶಾಖೆಗಳ ಮೂಲಕ 550.79 ರೂ.ಕೋಟಿ ವ್ಯವಹಾರ
ನಡೆಸಿ ರೂ.4.53 ಕೋಟಿ ನಿವ್ವಳ ಲಾಭ ಗಳಿಸಿದೆ. ಸದಸ್ಯರಿಗೆ ಶೇ.21 ಡಿವಿಡೆಂಡ್ ನೀಡಲಾಗುವುದು. ಸಂಸ್ಥೆಯ ಆಡಳಿತ ಕಛೇರಿ ಸೇರಿ 6 ಶಾಖೆಗಳು ಸ್ವಂತ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದೆ ಎಂದರು.
ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಹಿರಿಯ ಪ್ರಾಂತೀಯ ಅಧಿಕಾರಿ ಗುರುಪ್ರಸಾದ್ ಬಂಗೇರ ಅವರು ಸಂಘದ ಸದಸ್ಯರ ಹಕ್ಕುಗಳು ಮತ್ತು ಕರ್ತವ್ಯಗಳ ಕುರಿತು ಮಾಹಿತಿ ನೀಡಿದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಯಾನಂದ ಶೆಟ್ಟಿ ಬಾಕ್ರಬೈಲ್ ಗತ ವರ್ಷದ ವರದಿ ಹಾಗೂ ಮುಂದಿನ ಕ್ರಿಯಾ ಯೋಜನೆ ಮಂಡಿಸಿದರು. ಲೆಕ್ಕಪರಿಶೋಧಕ ರಾಮ್‌ಮೋಹನ್ ರೈ , ಸಂಘದ ನಿರ್ದೇಶಕ ವೇಣುಗೋಪಾಲ ಮಾರ್ಲ,
ಲೋಕನಾಥ ಶೆಟ್ಟಿ ,ತಾರಾನಾಥ ಶೆಟ್ಟಿ, ಶಾರದಾಮಣಿ, ಸರಿತಾ ಅಶೋಕ್, ಗಣಪತಿ ಭಟ್ ಸೇರಾಜೆ, ಮೋನಪ್ಪ ಪೂಜಾರಿ ಕೆರೆಮಾರು, ಸೋಮಪ್ಪ ನಾಕ್ ಕಡಬ, ಗಣೇಶ್ ಅತ್ತಾವರ, ಭವಾನಿ ಶಂಕರ ಶೆಟ್ಟಿ, ಅಶೋಕ್ ಕುಮಾರ್.ಯು.ಎಸ್, ಜಯಪ್ರಕಾಶ್
ರೈ.ಎನ್, ಎಂ.ಉಗ್ಗಪ್ಪ ಶೆಟ್ಟಿ, ಕರುಣಾಕರ ಜೆ.ಉಚ್ಚಿಲ್ ಉಪಸ್ಥಿತರಿದ್ದರು. ಉಪಾಧ್ಯಕ್ಷ ಲಿಂಗಪ್ಪ ಗೌಡ ಪನೆಯಡ್ಕ ಸ್ವಾಗತಿಸಿ, ನಿರ್ದೇಶಕ ಯು.ದೇವಪ್ಪ ನಾಕ್ ಉಪ್ಪಳಿಗೆ ವಂದಿಸಿದರು. ಶಾಖಾ ವ್ಯವಸ್ಥಾಪಕಿ ಪವಿತ್ರ.ಎನ್ ಕಾರ್ಯಕ್ರಮ ನಿರೂಪಿಸಿದರು.