ಆತ್ಮಾರ್ಥ ಸೇವೆಯಿಂದ ಪರಮಾನಂದ - ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ - ಶ್ರೀ ದತ್ತ ಜಯಂತಿ ಮಹೋತ್ಸವ

Published on

ವಿಟ್ಲ: ಅಹಂಕಾರ, ಮಮಕಾರವನ್ನು ಮೀರಿ ಬೆಳೆದಾಗ ಜೀವನದಲ್ಲಿ ಶಾಂತಿ ನೆಮ್ಮದಿ ಪಡೆಯಬಹುದು. ನಾನು ಎಂಬ ಅಹಂಕಾರ ಇರುವಲ್ಲಿ ಭಗವಂತ ಇರುವುದಿಲ್ಲ. ಸಂತ ಸಮಾಜವನ್ನು ನೋಡುವ ಜತೆಗೆ ಸಮಾಜ ಸಂತನನ್ನು ಅನುಸರಿಸಬೇಕು. ಆತ್ಮಾರ್ಥವಾಗಿ ಮಾಡುವ ಗುರುಸೇವೆಯಿಂದ ಪರಮಾನಂದವನ್ನು ಪಡೆಯಬಹುದು. ಸಂಸ್ಕಾರವಂತರಾಗಿ ಬದುಕು ನಡೆಸಿದಾಗ ಸುಸಂಸ್ಕೃತ ಸಮಾಜ ನಿರ್ಮಾಣ ಸಾಧ್ಯ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ದತ್ತ ಜಯಂತಿ ಮಹೋತ್ಸವ, ಶ್ರೀ ದತ್ತ ಮಹಾಯಾಗ, ಹರಿಕಥಾ ಸತ್ಸಂಗ ಮತ್ತು ಯಕ್ಷಗಾನ ಸಪ್ತಾಹ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.

ಸಾಧ್ವೀ ಮಾತಾನಂದಮಯೀ ದಿವ್ಯ ಸಾನ್ನಿಧ್ಯ ವಹಿಸಿದ್ದರು. ಹರಿದಾಸ ಚಂದ್ರಕಾಂತ ಭಟ್ ಅಶ್ವತ್ಥಪುರ, ಮುಂಬೈ ಶ್ರೀ ಗುರುದೇವ ಸೇವಾ ಬಳಗದ ದಾಮೋದರ ಶೆಟ್ಟಿ, ಡಾ.ಅದೀಪ್ ಶೆಟ್ಟಿ, ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಎ. ಸುರೇಶ್ ರೈ, ದಾವಣಗೆರೆಯ ವಕೀಲ ಹನುಮಂತಪ್ಪ, ಉದ್ಯಮಿ ಮೋಹನ ಹೆಗ್ಡೆ, ಮುಂಬೈ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಕಲ್ಪನಾ ಕೆ. ಶೆಟ್ಟಿ, ಸರ್ವಾಣಿ ಪಿ.ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ರೇಣುಕಾ ಎಸ್.ರೈ ಪ್ರಾರ್ಥಿಸಿದರು. ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಸಂಚಾಲಕ ಗಣಪತಿ ಭಟ್ ಸೇರಾಜೆ ಸ್ವಾಗತಿಸಿದರು. ಯೋಜನೆಯ ಸಾರ್ವಜನಿಕ ಸಂಪರ್ಕಾಽಕಾರಿ ಮಾತೇಶ್ ಭಂಡಾರಿ ವಂದಿಸಿದರು. ಯಶವಂತ ವಿಟ್ಲ ನಿರೂಪಿಸಿದರು.

ವಿವಿಧ ಕಾರ್ಯಕ್ರಮ:

ಬೆಳಗ್ಗೆ ಮಹಾಪೂಜೆ, ನಾಗತಂಬಿಲ, ಶ್ರೀ ದತ್ತಮಾಲಾಧಾರಿಗಳಿಂದ ನಾಮ ಸಂಕೀರ್ತನಾ ಶೋಭಾಯಾತ್ರೆ, ಚಂದ್ರಕಾಂತ ಭಟ್ ಅಶ್ವತ್ಥಪುರ ಅವರಿಂದ ಸಂತ ತುಕಾರಾಮ ಹರಿಕಥಾ ಸತ್ಸಂಗ, ಮಧ್ಯಾಹ್ನ ಶ್ರೀ ದತ್ತಮಹಾಯಾಗ ಸಪ್ತಾಹದ ಪೂರ್ಣಾಹುತಿ, ಮಹಾಪೂಜೆ, ಶ್ರೀಗಳಳಿಂದ ಮಧುಕರೀ-ಮಂತ್ರಾಕ್ಷತೆ, ಪ್ರಸಾದ ವಿತರಣೆ, ಮಹಾಸಂತರ್ಪಣೆ, ಪ್ರಸಿದ್ಧ ಯಕ್ಷಗಾನ ಕಲಾವಿದರ ಕೂಡುವಿಕೆಯಲ್ಲಿ ಮಹಿರಾವಣ ಕಾಳಗ ಯಕ್ಷಗಾನ ಬಯಲಾಟ, ರಾತ್ರಿ ರಂಗಪೂಜೆ, ವಿಶೇಷ ಬೆಳ್ಳಿರಥೋತ್ಸವ ಸೇವೆ-ಉಯ್ಯಾಲೆ ಸೇವೆ ನಡೆಯಿತು.

ವಿಶ್ವವನ್ನೇ ಗುರುವಾಗಿ ಸ್ವೀಕರಿಸಿದಾಗ ನಿಜವಾದ ಶಿಕ್ಷಕನಾಗಬಹುದು. ಮಾಡುವ ಕಾರ್ಯದಲ್ಲಿ ಚಂಚಲತೆಯಿದ್ದಾಗ ಕೆಲಸದಲ್ಲಿ ಯಶಸ್ವಿ ಗಳಿಸಲು ಸಾಧ್ಯವಿಲ್ಲ. ದೇವರೇ ಗುರುವಾಗಿ ದತ್ತಾತ್ರೇಯನಾಗಿ ಅವತರಿಸಿದ್ದು, ಇದು ಜ್ಞಾನವತಾರವಾಗಿದೆ. ಸಂಸ್ಕಾರ ತುಂಬುವ ನಿಟ್ಟಿನಲ್ಲಿ ಮಕ್ಕಳಲ್ಲಿ ಕೈಗೆ ಭಗವದ್ಗೀತೆಯನ್ನು ನೀಡಬೇಕಾಗಿದೆ. ಗುರುತತ್ವದ ಆರಾಧನೆ ಬದುಕಿನಲ್ಲಿ ಬಹಳಷ್ಟು ಪ್ರಾಮುಖ್ಯ ಪಡೆದಿದೆ. ವಿಶ್ವಮಾನವ ಧರ್ಮದ ಚಿಂತನೆಯನ್ನು ಹೊಂದಬೇಕಾಗಿದೆ.

| ಶ್ರೀ ಗುರುದೇವಾನಂದ ಸ್ವಾಮೀಜಿ

ಒಡಿಯೂರು ಗುರುದೇವದತ್ತ ಸಂಸ್ಥಾನ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net