ಸಹಕಾರಿ ತತ್ವದಿಂದ ಬದುಕಿಗೆ ಪರಿಪೂರ್ಣತೆ ; ಒಡಿಯೂರು ಸಹಕಾರಿ ಸಂಘದ ಮಂಗಳೂರು ಸೆಂಟ್ರಲ್ ಮಾರ್ಕೆಟ್ ಶಾಖೆ ಉದ್ಘಾಟಿಸಿ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ

mng-jan3-odiyuru 1
ಮಂಗಳೂರು ನಗರದ ಸೆಂಟ್ರಲ್ ಮಾರ್ಕೆಟ್ ರಸ್ತೆಯಲ್ಲಿರುವ ರಾಸಿಕ್ ಚೇಂಬರ್ಸ್‌ ಒಂದನೇ ಮಹಡಿಯಲ್ಲಿ ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ 23ನೇ ಮಂಗಳೂರು ಸೆಂಟ್ರಲ್ ಮಾರ್ಕೆಟ್ ಶಾಖೆಯನ್ನು ಶ್ರೀ ಗುರುದೇವಾನಂದ ಸ್ವಾಮೀಜಿ ಶುಕ್ರವಾರ ಉದ್ಘಾಟಿಸಿದರು. ಸಾಧ್ವಿ ಶ್ರೀ ಮಾತಾನಂದಮಯಿ, ಶಾಸಕ ಡಿ.ವೇದವ್ಯಾಸ ಕಾಮತ್, ಮಂಗಳೂರು ಮೇಯರ್ ಮನೋಜ್ ಕುಮಾರ್, ಒಡಿಯೂರು ಸಹಕಾರಿ ಸಂಘದ ಅಧ್ಯಕ್ಷ ಎ.ಸುರೇಶ್ ರೈ, ಉಪಾಧ್ಯಕ್ಷ ಲಿಂಗಪ್ಪ ಗೌಡ ಪನೆಯಡ್ಕ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಯಾನಂದ ಶೆಟ್ಟಿ ಬಾಕ್ರಬೈಲ್, ಶಾಖಾ ವ್ಯವಸ್ಥಾಪಕಿ ಕಾವ್ಯಾಶ್ರೀ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
Published on

ವಿಜಯವಾಣಿ ಸುದ್ದಿಜಾಲ ಮಂಗಳೂರು

ಸಹಕಾರಿ ತತ್ವದಿಂದ ಬದುಕಿಗೆ ಪರಿಪೂರ್ಣತೆ ಪ್ರಾಪ್ತಿಯಾಗುತ್ತದೆ. ಯಾಕೆಂದರೆ ಬದುಕಿನ ತತ್ವವೇ ಸಹಕಾರಿ ತತ್ವವಾಗಿದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್‌ನ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.

ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ 23ನೇ ಮಂಗಳೂರು ಸೆಂಟ್ರಲ್ ಮಾರ್ಕೆಟ್ ಶಾಖೆಯನ್ನು ಮಂಗಳೂರಿನ ಸೆಂಟ್ರಲ್ ಮಾರ್ಕೆಟ್ ರಸ್ತೆಯಲ್ಲಿರುವ ರಾಸಿಕ್ ಚೇಂಬರ್ಸ್‌ ಒಂದನೇ ಮಹಡಿಯಲ್ಲಿ ಶುಕ್ರವಾರ ಉದ್ಘಾಟಿಸಿ ಆಶೀರ್ವಚನ ನೀಡಿದರು.

*ಗ್ರಾಹಕರೇ ಜೀವಾಳ: ಗ್ರಾಹಕರು ಸಹಕಾರಿ ಸಂಘದ ಜೀವಾಳ. ಗ್ರಾಹಕರು ಪೂರ್ಣವಾಗಿ ತೊಡಗಿಕೊಂಡಾಗ ಸಂಘ ಯಶಸ್ವಿಯಾಗುತ್ತದೆ. ಈ ಹಿನ್ನೆಲೆಯಲ್ಲಿ ಸಂಘದ ಅಧ್ಯಕ್ಷರು, ನಿರ್ದೇಶಕರು, ಪದಾಧಿಕಾರಿಗಳು ಸಿಬ್ಬಂದಿ ಬಳಗ ತೊಡಗಿಕೊಂಡಾಗ ಸಮಾಜದ ಹಿತಕ್ಕಾಗಿ ಸ್ಥಾಪಿಸಲಾದ ಸಂಘದ ಬೆಳೆಯಲು ಸಾಧ್ಯವಾಗುತ್ತದೆ. ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ತಂಡ ಹೆಚ್ಚು ಬದ್ಧತೆಯಿಂದ ಕಾರ್ಯನಿರ್ವಹಿಸುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ ಎಂದರು.

ಶಾಸಕ ಡಿ.ವೇದವ್ಯಾಸ ಕಾಮತ್ ಮಾತನಾಡಿ, ಒಡಿಯೂರು ಎನ್ನುವುದೇ ಒಂದು ವಿಶ್ವಾಸ. ಆದ್ದರಿಂದ ಪ್ರಸ್ತುತ ಸಂಘ ತ್ವರಿತಗತಿಯ ಬೆಳವಣಿಗೆ ಕಾಣುವುದು ಸಾಧ್ಯವಾಗಿದೆ. ವಿಶ್ವಾಸಾರ್ಹ ಸಂಸ್ಥೆಯಾಗಿ ಗುರುತಿಸಿಕೊಳ್ಳುವುದು ಸಾಧ್ಯವಾಗಿದೆ ಎಂದರು.

ಸಾಧ್ವಿ ಶ್ರೀ ಮಾತಾನಂದಮಯಿ ಸಾನ್ನಿಧ್ಯ ವಹಿಸಿದ್ದರು. ಮಂಗಳೂರು ಮೇಯರ್ ಮನೋಜ್ ಕುಮಾರ್, ಡೊಂಗರಕೇರಿ ಶ್ರೀ ವೆಂಕಟರಮಣ ದೇವಸ್ಥಾನದ ಮಾಜಿ ಮೊಕ್ತೇಸರ ವರದರಾಯ ನಾಗ್ವಿಕರ್, ಉದ್ಯಮಿ ಕಿರಣ್ ಸಾಂಗ್ವಿ, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿರ್ದೇಶಕಿ ಭಾರತಿ ಜಿ.ಭಟ್, ದ.ಕ. ಜಿಲ್ಲಾ ಒಕ್ಕೂಟ ಸೌಹಾರ್ದ ಸಹಕಾರಿ ಮಂಗಳೂರು ಅಧ್ಯಕ್ಷ ಭಾಸ್ಕರ್ ದೇವಸ್ಯ, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಜಿಲ್ಲಾ ಸಂಯೋಜಕ ವಿಜಯ ಬಿ.ಎಸ್. ಮುಖ್ಯ ಅತಿಥಿಗಳಾಗಿದ್ದರು.

ಒಡಿಯೂರು ಸಹಕಾರಿ ಸಂಘದ ಅಧ್ಯಕ್ಷ ಎ.ಸುರೇಶ್ ರೈ ಪ್ರಸ್ತಾವನೆಗೈದರು. ಉಪಾಧ್ಯಕ್ಷ ಲಿಂಗಪ್ಪ ಗೌಡ ಪನೆಯಡ್ಕ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಯಾನಂದ ಶೆಟ್ಟಿ ಬಾಕ್ರಬೈಲ್, ಶಾಖಾ ವ್ಯವಸ್ಥಾಪಕಿ ಕಾವ್ಯಾಶ್ರೀ ಶೆಟ್ಟಿ ಉಪಸ್ಥಿತರಿದ್ದರು. ಪತ್ರಕರ್ತ ಲೋಕೇಶ್ ರೈ ಕಾರ್ಯಕ್ರಮ ನಿರ್ವಹಿಸಿದರು.

-----

ತಾಯಿ ಮಗುವಿಗಾಗಿ ಕೈ ಮುಂದೊಡ್ಡುವುದು ಹಾಗೂ ಅದೇ ಸಂದರ್ಭ ಮಗು ಕೂಡ ತಾಯಿಗಾಗಿ ಕೈ ಮುಂದೊಡ್ಡುವ ಸನ್ನಿವೇಶವನ್ನು ಸಹಕಾರಿ ತತ್ವಕ್ಕೆ ಪ್ರಾತಿನಿಧಿಕವಾಗಿ ಹೇಳಬಹುದು. ಸಂಘಕ್ಕೆ ಅರ್ಪಣಾ ಮನೋಭಾವದ ಆಡಳಿತ ಮಂಡಳಿ, ಸಿಬ್ಬಂದಿ ವರ್ಗ ಇದ್ದು, ಗ್ರಾಹಕರಿಗೆ ನಗುಮೊಗದ ಸೇವೆಯ ಪರಂಪರೆ ಮುಂದುವರಿಯಲಿದೆ.

ಶ್ರೀ ಗುರುದೇವಾನಂದ ಸ್ವಾಮೀಜಿ

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net