ಒಡಿಯೂರಿನಲ್ಲಿ ಗ್ರಾಮೋತ್ಸವ, ಗುರುವಂದನೆ - ಸಾಧ್ವಿ ಮಾತಾನಂದಮಯಿ ಮಾರ್ಗದರ್ಶನದಲ್ಲಿ ಪಾದುಕಾ ಪೂಜೆ

PTR_8 AUG_7
Published on

ವಿಟ್ಲ: ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ರಾಜಾಂಗಣದಲ್ಲಿ ಒಡಿಯೂರು ಶ್ರೀಗಳ ಜನ್ಮದಿನೋತ್ಸವ ಸಮಿತಿ ವತಿಯಿಂದ ಶ್ರೀಗಳವರ ಜನ್ಮದಿನೋತ್ಸವ, ಗ್ರಾಮೋತ್ಸವ, ಗುರುವಂದನೆ, ಸೇವಾ ಸಂಭ್ರಮ ನೆರವೇರಿತು.

ಬೆಳಗ್ಗೆ ಶ್ರೀ ಗಣಪತಿ ಹವನ, ಮಹಾಪೂಜೆ, ರವಿರಾಜ್ ಶೆಟ್ಟಿ ಮತ್ತು ಬಳಗದವರಿಂದ ನಾಮಸಂಕೀರ್ತನೆ ನಡೆಯಿತು. ಒಡಿಯೂರು ಕ್ಷೇತ್ರದಿಂದ ರಾಜಾಂಗಣದವರೆಗೆ ಗಣ್ಯ ಅತಿಥಿಗಳ ಶೋಭಾಯಾತ್ರೆ ಚೆಂಡೆ ಬಳಗ, ಪೂರ್ಣಕುಂಭದ ಮೂಲಕ ನಡೆಯಿತು. ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಯವರಿಗೆ ಗುರುಕುಲದ ಪುಟಾಣಿಗಳಿಂದ ಗುರುವಂದನೆ, ಸಂಘ ಸಂಸ್ಥೆಗಳಿಂದ ಗುರುವಂದನೆ ನೆರವೇರಿತು.

ಸಾಧ್ವಿ ಮಾತಾನಂದಮಯಿ ಮಾರ್ಗದರ್ಶನದಲ್ಲಿ ಲೋಕನಾಥ ಜಿ.ಶೆಟ್ಟಿ, ಸರಿತಾ ಲೋಕನಾಥ ಪಾದುಕಾ ಪೂಜೆ ನಡೆಸಿದರು. ಚಂದ್ರಶೇಖರ ಉಪಾಧ್ಯಾಯ ಕುರುವಮೂಲೆ ವೈದಿಕ ಕಾರ್ಯಕ್ರಮ ನೆರವೇರಿಸಿದರು. ಗುರುಬಂಧುಗಳು ಒಡಿಯೂರು ಶ್ರೀಗಳ ತುಲಾಭಾರವನ್ನು ರಜತದ ಮೂಲಕ ಮಾಡಿದರು. ಮಾತೃಶಕ್ತಿಯಿಂದ ಉಯ್ಯಾಲೆ ಸೇವೆ ನಡೆಸಿದರು. ಮಧ್ಯಾಹ್ನ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ವ್ರತಪೂಜೆ, ಸಾಯಂಕಾಲ ಮಂಗಳೂರು ಶ್ರೀ ಲಲಿತೆ ಕಲಾವಿದರಿಂದ ಕದ್ರಿ ನವನೀತ ಶೆಟ್ಟಿ ರಚನೆ ಸಾಹಿತ್ಯದಲ್ಲಿ ಶನಿ ಮಹಾತ್ಮ್ಯೆ ಕನ್ನಡ ನಾಟಕ ಪ್ರದರ್ಶನಗೊಂಡಿತು. ರಾತ್ರಿ ಶ್ರೀ ಸನ್ನಿಧಿಯಲ್ಲಿ ವಿಶೇಷ ರಂಗಪೂಜೆ, ಬೆಳ್ಳಿ ರಥೋತ್ಸವ, ಮಹಾಪೂಜೆ ಸಂಪನ್ನಗೊಂಡಿತು.

ಬಹುಮಾನ, ಸಹಾಯಹಸ್ತ ವಿತರಣೆ

ಗ್ರಾಮೋತ್ಸವ ಅಂಗವಾಗಿ ನಡೆದ ಭಕ್ತಿಸಂಕೀರ್ತನೆ, ಹನುಮಾನ್ ಚಾಲಿಸಾ ಸ್ಪರ್ಧೆ, ಕೆಸರುಗದ್ದೆ ಕ್ರೀಡಾಕೂಟ, ಒಳಾಂಗಣ ಕ್ರೀಡಾಕೂಟ, ಅಂತರ್ ಕಾಲೇಜು ಕಿರುನಾಟಕ ಸ್ಪರ್ಧೆಯಲ್ಲಿ ವಿಜೇತವರಿಗೆ ಬಹುಮಾನ ವಿತರಿಸಲಾಯಿತು. ಅನಾರೋಗ್ಯ ಪೀಡಿತರ ಚಿಕಿತ್ಸೆಗೆ, ಕುಟುಂಬಗಳಿಗೆ ಮರಣ ಸಾಂತ್ವನ ನೆರವು, ಮನೆ ನಿರ್ಮಾಣಕ್ಕೆ, ವಿದ್ಯಾಭ್ಯಾಸಕ್ಕೆ ಸಹಾಯ ಟ್ರಸ್ಟ್ - ಭಜನಾ ಮಂದಿರಗಳಿಗೆ ಆರ್ಥಿಕ ಸಹಾಯಹಸ್ತ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net