ಒಡಿಯೂರು ಶ್ರೀ ಷಷ್ಠೃಬ್ದ ಸಂಭ್ರಮಕ್ಕೆ ಚಾಲನೆ

vil odiyoor
Published on

ಉಡುಪಿ: ಶರೀರ, ಬುದ್ಧಿ, ಮನಸ್ಸು ಸರಿಯಾಗಿ ಉಪಯೋಗಿಸಿ ಜೀವನ ಗುರಿ ಮುಟ್ಟಬೇಕು. ಆಗ ಮಾತ್ರ ಬದುಕಿನ ಸಾರ್ಥಕತೆ ಕಾಣಲು ಸಾಧ್ಯ ಎಂದು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.

ಮಂಗಳವಾರ ಪರ್ಕಳದಲ್ಲಿ ಒಡಿಯೂರು ಶ್ರೀಗಳ ಷಷ್ಠೃಬ್ದ ಸಂಭ್ರಮ, ‘ಜ್ಞಾನವಾಹಿನಿ’ ಉಡುಪಿ ವಲಯ ಸಮಿತಿಯ ಸರಣಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಶ್ರೀಗಳು ಆಶಿರ್ವಚನ ನೀಡಿದರು.

ಮನುಷ್ಯನ ದೇಹ ಕ್ಷೀಣಗೊಳ್ಳುವ ಮೊದಲು ಎಲ್ಲ ಒಳ್ಳೆಯ ಕೆಲಸಗಳನ್ನು ಮಾಡಿ ಮುಗಿಸಬೇಕು. ಆತ್ಮಜ್ಞಾನ ತತ್ವದಡಿ ಬದುಕು ಸಾಗಿಸಿದಾಗ ನಾವು ಬೆಳೆಯುವುದರ ಜತೆಗೆ ಸಮಾಜವೂ ಅಭಿವೃದ್ಧಿಗೊಳ್ಳಲು ಸಾಧ್ಯ ಎಂದರು.

‘ಜ್ಞಾನವಾಹಿನಿ’ ಉಡುಪಿ ವಲಯ ಸಮಿತಿ ಷಷ್ಠೃಬ್ದ ಸಂಭ್ರಮ ಅಂಗವಾಗಿ ಹಲವು ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಜನರಲ್ಲಿ ಸಾಮಾಜಿಕ ಕಳಕಳಿ ಹಾಗೂ ಸಂಸ್ಕೃತಿ ಉಳಿಸುವ ಕೆಲಸ ಮಾಡುತ್ತಿರುವ ಬಗ್ಗೆ ಶ್ಲಾಘಿಸಿದರು.

ಸಾಧ್ವಿ ಶ್ರೀ ಮಾತಾನಂದಮಯೀ ಹನುಮಾನ್ ಚಾಲಿಸ್ ಪಠಣ ಮಾಡಿ ಆಶೀರ್ವಚನ ನೀಡಿದರು. ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಹಾಗೂ ಶ್ರೀಗಳ ಷಷ್ಠೃಬ್ದ ಸಂಭ್ರಮದ ಕೇಂದ್ರ ಸಮಿತಿಯ ಅಧ್ಯಕ್ಷ ಡಾ.ಮೋಹನ್ ಆಳ್ವ, ಉಡುಪಿ ವಲಯ ಸಮಿತಿ ಅಧ್ಯಕ್ಷ ಸುರೇಶ್ ಶೆಟ್ಟಿ ಗುರ್ಮೆ ಮಾತನಾಡಿದರು.

ಷಷ್ಠೃಬ್ದ ಸಂಭ್ರಮದ ಕೇಂದ್ರ ಸಮಿತಿ ಕಾರ್ಯಾಧ್ಯಕ್ಷ ಕೆ.ಪದ್ಮನಾಭ ಕೊಟ್ಟಾರಿ, ಕೋಶಾಧಿಕಾರಿ ಎ.ಸುರೇಶ್ ರೈ, ಸಂಘಟನಾ ಕಾರ್ಯದರ್ಶಿ ಚಂದ್ರಹಾಸ ಶೆಟ್ಟಿ, ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಯೋಜನಾ ನಿರ್ದೇಶಕ ಕಿರಣ್ ಯು., ಉಡುಪಿ ವಲಯ ಸಮಿತಿ ಉಪಾಧ್ಯಕ್ಷ ಜಯಕರ್ ಶೆಟ್ಟಿ ಇಂದ್ರಾಳಿ, ಪರ್ಕಳ ಸುರಕ್ಷಾ ಭವನದ ಮಾಲೀಕ ರಾಮ ಮೂರ್ತಿ ಭಟ್ ಉಪಸ್ಥಿತರಿದ್ದರು.

ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ನವನೀತ್ ಶೆಟ್ಟಿ ಕದ್ರಿ ಪ್ರಸ್ತಾವಿಸಿದರು. ಉಡುಪಿ ವಲಯ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ. ಪ್ರಭಾಕರ ಶೆಟ್ಟಿ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net