

ರಾಯಚೂರು: ಹಣಕಾಸಿನ ತೊಂದರೆಯಿಂದ ಸ್ವಗ್ರಾಮಕ್ಕೆ ತೆರಳಲು ಸಾಧ್ಯವಾಗದೆ ನಗರದ ರೈಲು ನಿಲ್ದಾಣದಲ್ಲಿದ್ದ ಓರಿಸ್ಸಾ ಮೂಲದ ಕಾರ್ಮಿಕರಿಗೆ ಇಟ್ಟಿಗೆ ಬಟ್ಟಿ ಮಾಲೀಕರಿಂದ ನೆರವು ಕೊಡಿಸಿ ಪೊಲೀಸರು ಸಹಾಯ ಹಸ್ತ ಚಾಚಿದ್ದಾರೆ.
ತಾಲೂಕಿನ ವಿವಿಧ ಗ್ರಾಮದಲ್ಲಿನ ಇಟ್ಟಿಗೆ ಬಟ್ಟಿಗಳಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯರು ಸೇರಿ 43 ಜನ ಓರಿಸ್ಸಾ ಮೂಲದ ಕಾರ್ಮಿಕರ ಬಳಿ ಸ್ವಗ್ರಾಮಕ್ಕೆ ಮರಳಲು ಹಣ ಇರಲಿಲ್ಲ. ಇದರಿಂದಾಗಿ ಬುಧವಾರ ರಾತ್ರಿ ನಗರದ ರೈಲು ನಿಲ್ದಾಣದಲ್ಲಿದ್ದು, ಓರಿಸ್ಸಾದಲ್ಲಿನ ಪರಿಚಿತರಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು.
ಓರಿಸ್ಸಾ ಮೂಲದ ಲಿಬರಲ್ ಡೆಮಾಕ್ರಟಿಕ್ ಅಸೋಸಿಯೇಷನ್ ಮತ್ತು ಪೀಪಲ್ಸ್ ಹೋಪ್ ಫೌಂಡೇಷನ್ ಪದಾಧಿಕಾರಿಗಳು ಕಾರ್ಮಿಕರ ರಕ್ಷಣೆಗೆ ಬರುವಂತೆ ಓರಿಸ್ಸಾ ಮತ್ತು ಕರ್ನಾಟಕದ ಮುಖ್ಯಮಂತ್ರಿ ಹಾಗೂ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳನ್ನು ಟ್ಯಾಗ್ ಮಾಡಿ ಟ್ವಿಟ್ಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದರು.
ಈ ಕುರಿತ ಮಾಹಿತಿ ತಿಳಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್, ತಡರಾತ್ರಿ ಅಧಿಕಾರಿಗಳನ್ನು ರೈಲು ನಿಲ್ದಾಣಕ್ಕೆ ಕಳಿಸಿ ಇಟ್ಟಿಗೆ ಬಟ್ಟಿ ಮಾಲೀಕನಿಂದ ಕಾರ್ಮಿಕರು ಸ್ವಗ್ರಾಮಕ್ಕೆ ತೆರಳಲು ಹಣದ ನೆರವು ಕೊಡಿಸಿದ್ದಾರೆ.