

ಹುಬ್ಬಳ್ಳಿ: ಕ್ರಿಕೆಟ್ ಅಸೋಸಿಯೇಶನ್ ಫಾರ್ ಬ್ಲೈಂಡ್ ಇನ್ ಇಂಡಿಯಾ (ಸಿಎಬಿಐ) ಆಯೋಜಿಸಿದ್ದ ಅಂಧ ಮಹಿಳೆಯರ ರಾಷ್ಟ್ರೀಯ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಒಡಿಶಾ ಚಾಂಪಿಯನ್ ಆಗಿದೆ.
ಇಲ್ಲಿಯ ದೇಶಪಾಂಡೆನಗರ ಕೆಜಿಎ ಮೈದಾನದಲ್ಲಿ ಶುಕ್ರವಾರ ನಡೆದ ಫೈನಲ್ನಲ್ಲಿ ಒಡಿಶಾ, ಆತಿಥೇಯ ಕರ್ನಾಟತ ತಂಡದ ವಿರುದ್ಧ 6 ವಿಕೆಟ್ಗಳಿಂದ ಜಯಿಸಿ ಟ್ರೋಫಿ ತನ್ನದಾಗಿಸಿಕೊಂಡಿತು. ಚಾಂಪಿಯನ್ ತಂಡ 1.04 ಲಕ್ಷ ರೂ. ಹಾಗೂ ರನ್ನರ್ ಅಪ್ ತಂಡ 80 ಸಾವಿರ ರೂ. ನಗದು ಬಹುಮಾನ ಪಡೆಯಿತು.
ಮೊದಲು ಬ್ಯಾಟ್ ಮಾಡಿದ ಕರ್ನಾಟಕ 18.3 ಓವರ್ಗಳಲ್ಲಿ 93ರನ್ಗೆ ಆಲೌಟ್ ಆಯಿತು. ರೇಣುಕಾ ರಜಪೂತ 17, ದೀಪಿಕಾ ಟಿ.ಸಿ. 16, ದೀವಕ್ಕಾ 12, ವರ್ಷಾ ಯು 10 ರನ್ ಗಳಿಸಿದರು. ಒಡಿಶಾ ಪರ ಜಮುನಾ ರಾಣಿ ಟುಡು 19ಕ್ಕೆ 2 ವಿಕೆಟ್ ಪಡೆದರು. ಒಡಿಶಾ 13.1 ಓವರ್ಗಳಲ್ಲಿ 4 ವಿಕೆಟ್ಗೆ 94 ರನ್ ಗಳಿಸಿ ಜಯಭೇರಿ ಬಾರಿಸಿತು. ಬಸಂತಿ ಹಂಸ್ದಾ ಅಜೇಯ 34, ಜಮುನಾ ರಾಣಿ 24 ಹಾಗೂ ಪದ್ಮಿನಿ ಟುಡು ಅಜೇಯ 14 ರನ್ ಬಾರಿಸಿದರು.
ಒಡಿಶಾ ತಂಡದ ಜಿಲಿ ಬಿರುವಾ ಫೈನಲ್ ಪಂದ್ಯದ ಆಟಗಾರ್ತಿ, ಬಿ1 ವಿಭಾಗದಲ್ಲಿ ರಾಜಸ್ಥಾನದ ಸಿಮು ದಾಸ್, ಬಿ 2 ವಿಭಾಗದಲ್ಲಿ ದೆಹಲಿಯ ಮೆಂಕಾ ಕುಮಾರಿ ಹಾಗೂ ಬಿ 3 ವಿಭಾಗದಲ್ಲಿ ಜಿಲಿ ಬಿರುವಾ ಸರಣಿಶ್ರೇಷ್ಠ ಪ್ರಶಸ್ತಿ ಪಡೆದರು. ಪಂದ್ಯಾವಳಿಯಲ್ಲಿ 16 ತಂಡಗಳು ಪಾಲ್ಗೊಂಡಿದ್ದವು.
ಸಮಾರೋಪ ಸಮಾರಂಭದಲ್ಲಿ ಸಿಎಬಿಐ ಅಧ್ಯಕ್ಷ ಡಾ. ಮಹಾಂತೇಶ ಕಿವುಡಸಣ್ಣವರ್, ಸಂಸ್ಥಾಪಕ ಸದಸ್ಯ ಉದಯಕುಮಾರ, ಹೈಕೋರ್ಟ್ ವಕೀಲ ಸಂದೀಪ ಪಾಟೀಲ, ಸ್ವರ್ಣಾ ಗ್ರುಪ್ ಆಫ್ ಕಂಪನೀಸ್ನ ಎಂಡಿ ಡಾ. ವಿ.ಎಸ್.ವಿ. ಪ್ರಸಾದ, ವೀರಣ್ಣ ಸವಡಿ, ಅಂಚಲ್ ಕೊಂಗವಾಡ, ಶಂಕರ ಕೋಳಿವಾಡ, ಅಂಜನಪ್ಪ ಮುತ್ತಪ್ಪ, ಇತರರು ಇದ್ದರು.