ಅಕ್ಟೋಬರ್ 23 ರಿಂದ ಸ್ವತಂತ್ರ ಭಾರತದ ರಥಯಾತ್ರೆ: ಹರಿಹರದ ಪಂಚಮಸಾಲಿ ಗುರುಪೀಠದಿಂದ ಆಯೋಜನೆ

182
Published on

ಹರಿಹರ: ವೀರ ರಾಣಿ ಕಿತ್ತೂರು ಚನ್ನಮ್ಮ ಬ್ರಿಟಿಷರ ವಿರುದ್ಧ ಹೋರಾಟ ಮಾಡಿ 200 ವರ್ಷ ಆಗಿರುವ ಸ್ಮರಣೆಯಲ್ಲಿ ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದಿಂದ ಅಕ್ಟೋಬರ್ 23 ರಿಂದ ಸ್ವತಂತ್ರ ಭಾರತದ ರಥಯಾತ್ರೆಯನ್ನು ಆಯೋಜಿಸಿದೆ ಎಂದು ಗುರುಪೀಠದ ಶ್ರೀ ವಚನಾನಂದ ಸ್ವಾಮೀಜಿ ಹೇಳಿದರು.

ಗುರುಪೀಠದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಣಿ ಚನ್ನಮ್ಮ ಅವರು ದೇಶಕ್ಕಾಗಿ ಮಾಡಿದ ಬಲಿದಾನ, ಅವರ ಪರಾಕ್ರಮವನ್ನು ಯುವ ಜನರಿಗೆ ತಿಳಿಸುವ ಉದ್ದೇಶದಿಂದ ಈ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ರಾಣಿ ಚನ್ನಮ್ಮ ಅವರ ಐಕ್ಯವಾದ ಸ್ಥಳ ಬೆಳಗಾವಿ ಜಿಲ್ಲೆ ಬೈಲಹೊಂಗಲದಿಂದ ಅಕ್ಟೋಬರ್ 23ರಿಂದ ಆರಂಭವಾಗುವ ರಥಯಾತ್ರೆ ರಾಜ್ಯದ 16 ಜಿಲ್ಲೆಗಳಲ್ಲಿ ಒಂದು ವರ್ಷದ ಅವಧಿವರೆಗೆ ಸಂಚರಿಸಲಿದೆ. ಜಿಲ್ಲಾ, ತಾಲೂಕು ಕೇಂದ್ರಗಳ ಜತೆಗೆ ಗ್ರಾಮೀಣ ಭಾಗಕ್ಕೂ ಯಾತ್ರೆ ಸಾಗಲಿದೆ ಎಂದು ಹೇಳಿದರು.

ಯಾತ್ರೆಯ ಚಾಲನೆ, ಅಂತ್ಯಗೊಳಿಸುವುದು, ಸಮಾರೋಪ ಸಮಾರಂಭದ ಕುರಿತು ಶೀಘ್ರವೇ ತೀರ್ಮಾನ ಕೈಗೊಳ್ಳಲಾಗುವುದು. ಈ ರಥಯಾತ್ರೆ ಮೂಲಕ ಸಮುದಾಯದ ಜನರಲ್ಲಿ ಸಂಘಟನೆ ಮೂಡಿಸುವ ಆಶಯವಿದೆ. ಸುಮಾರು 25 ಸಾವಿರ ಭಕ್ತರ ಮನೆಗೆ ಭೇಟಿ ನೀಡುವ ಉದ್ದೇಶ ಹೊಂದಲಾಗಿದೆ ಎಂದರು.

ನಗರದ ನದಿ ದಡದಲ್ಲಿ ನಿರ್ಮಿಸಿರುವ ತುಂಗಾರತಿ ಲೋಕಾರ್ಪಣೆಗೆ ಆಗಮಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೋರಲಾಗಿದೆ. ತುಂಗಾರತಿ ಸ್ಥಳದಲ್ಲಿ ಎಂಟು ಮಂಟಪಗಳ ಮೇಲೆ ಮಹಾ ಪುರುಷರ ಮೂರ್ತಿಗಳನ್ನು ಸ್ಥಾಪಿಸುವ ಉದ್ದೇಶವಿದೆ. ಲೋಕಾರ್ಪಣೆ ಸಮಾರಂಭದ ದಿನವನ್ನು ಶೀಘ್ರವೇ ಅಂತಿಮಗೊಳಿಸಲಾಗುವುದು ಎಂದು ಮಾಹಿತಿ ನೀಡಿದರು.

ಗುರುಪೀಠದ ಪ್ರಧಾನ ಧರ್ಮದರ್ಶಿ ಬಿ.ಸಿ. ಉಮಾಪತಿ, ಆಡಳಿತಾಧಿಕಾರಿ ಡಾ.ರಾಜಕುಮಾರ್, ಪಂಚಮಸಾಲಿ ಸಮಾಜದ ಕಾರ್ಯಾಧ್ಯಕ್ಷ ಸೋಮಗೌಡ ಪಾಟೀಲ್, ಪ್ರಕಾಶ್ ಪಾಟೀಲ್, ಚಂದ್ರಶೇಖರ ಪೂಜಾರ್, ಮಲ್ಲಿನಾಥ್, ಬೆಟ್ಟನಗೌಡ್ರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net