

ಮಡಿಕೇರಿ: ಮಡಿಕೇರಿ ದಸರಾ ಸಾಂಸ್ಕತಿಕ ಸಮಿತಿ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಇಂದಿನಿಂದ(ಅ.೧೬) ಪ್ರಾರಂಭವಾಗಲಿದೆ. ಆರಂಭಿಕ ದಿನವೇ ಸಂಗೀತ, ನೃತ್ಯ, ವಾದ್ಯಗಳ ಸಂಗಮದ ವೈವಿಧ್ಯತೆಗಳು ಮೂಡಿಬರಲಿದೆ ದಸರಾ ಸಾಂಸ್ಕತಿಕ ಸಮಿತಿ ಅಧ್ಯಕ್ಷ ಎಚ್.ಟಿ.ಅನಿಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಂಜೆ ೭ ಗಂಟೆಯಿಂದ ನಗರದ ಗಾಂಧಿ ಮೈದಾನದಲ್ಲಿನ ಕಲಾಸಂಭ್ರಮ ವೇದಿಕೆಯಲ್ಲಿ ಪ್ರಥಮ ದಿನದ ಆಕರ್ಷಣೆಯಾಗಿ ಅಂತರರಾಷ್ಟ್ರೀಯ ಖ್ಯಾತಿಯ ಬೆಂಗಳೂರಿನ ಕಲಾವಿದ ಡ್ರಮ್ ದೇವಾರವರ ತಂಡದಿಂದ ವಾದ್ಯ ಮತ್ತು ಸಂಗೀತ ಕಾರ್ಯಕ್ರಮ ಇರುತ್ತದೆ. ವಿವಿಧ ಭಾಷೆಗಳ ೬೦೦ಕ್ಕೂ ಅಧಿಕ ಸಿನಿಮಾಗಳಲ್ಲಿ ವಾದ್ಯಸಂಗೀತಕಾರನಾಗಿ ಕಾರ್ಯನಿರ್ವಹಿಸಿರುವ ಡ್ರಮ್ ದೇವ ವಿದೇಶಗಳಲ್ಲಿಯೂ ಕಾರ್ಯಕ್ರಮ ನೀಡಿದ್ದಾರೆ. ಮಡಿಕೇರಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳ ಮೊದಲ ದಿನ ದೇವಾ ಅವರೊಂದಿಗೆ ಎದೆ ತುಂಬಿ ಹಾಡಿದೆನು ಖ್ಯಾತಿಯ ಗಾಯಕ ಪುರುಷೋತ್ತಮ, ಸರಿಗಮಪ ಖ್ಯಾತಿಯ ಹಂಸಿನಿ, ದಿವ್ಯಾಯಾದವ್, ಮನುಯಾದವ್ ಸೇರಿದಂತೆ ಅನೇಕ ಗಾಯಕರು, ಖ್ಯಾತ ವಾದ್ಯ ಸಂಗೀತಕಾರರಿಂದ ಕಾರ್ಯಕ್ರಮ ಆಯೋಜಿತವಾಗಿದೆ ಎಂದು ತಿಳಿಸಿದ್ದಾರೆ.
ವೀರಾಜಪೇಟೆಯ ನಾಟ್ಯಾಂಜಲಿ ನೃತ್ಯ ಸಂಸ್ಥೆಯಿಂದ ನೃತ್ಯ ವೈವಿಧ್ಯ, ಮಡಿಕೇರಿಯ ಕಲಾಕಾವ್ಯ ನಾಟ್ಯಶಾಲಾ ವಿದ್ಯಾರ್ಥಿಗಳಿಂದ ನೃತ್ಯವೈವಿಧ್ಯ, ಮದೆನಾಡಿನ ಆದಿಚುಂಚನಗಿರಿ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳಿಂದ ಶಿವಚರಿತಾಮತಂ ನತ್ಯ ರೂಪಕ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಮೊದಲ ದಿನದ ಆಕರ್ಷಣೆಯಾಗಿದೆ. ಇದರೊಂದಿಗೆ ಅನೇಕ ವೈವಿಧ್ಯಮಯ ಕಾರ್ಯಕ್ರಮಗಳು ಮೊದಲ ದಿನ ಆಯೋಜಿತವಾಗಿದೆ ಎಂದು ತಿಳಿಸಿದ್ದಾರೆ.
ಸಂಜೆ ೬ ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಬೋಸರಾಜ್ ಕಲಾಸಂಭ್ರಮ ವೇದಿಕೆಯಲ್ಲಿ ದಸರಾ ಸಾಂಸ್ಕತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ. ಮಡಿಕೇರಿ ದಸರಾ ಸಮಿತಿ ಅಧ್ಯಕ್ಷೆ, ನಗರ ದಸರಾ ಸಮಿತಿ ಅಧ್ಯಕ್ಷೆ ಅನಿತಾಪೂವಯ್ಯ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಶಾಸಕ ಡಾ.ಮಂಥರ್ ಗೌಡ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ, ಶಾಸಕ ಎ.ಎಸ್.ಪೊನ್ನಣ್ಣ, ದಸರಾ ಸಮಿತಿ ಕಾರ್ಯಾಧ್ಯಕ್ಷ ಪ್ರಕಾಶ್ ಆಚಾರ್ಯ, ವಿಧಾನಪರಿಷತ್ ಸದಸ್ಯ ಎಂ.ಪಿ.ಸುಜಾಕುಶಾಲಪ್ಪ, ವಿಧಾನಪರಿಷತ್ ಮಾಜಿ ಸದಸ್ಯರುಗಳಾದ ಶಾಂತೆಯಂಡ ವೀಣಾ ಅಚ್ಚಯ್ಯ, ಎಂ.ಪಿ.ಸುನೀಲ್ ಸುಬ್ರಹ್ಮಣಿ, ನಗರಸಭೆಯ ಉಪಾಧ್ಯಕ್ಷೆ ಸವಿತಾರಾಕೇಶ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಸ್.ವಿ.ಪ್ರಸಾದ್, ಜಿಲ್ಲಾಧಿಕಾರಿ ವೆಂಕಟರಾಜಾ, ಪೊಲೀಸ್ ವರಿಷ್ಟಾಧಿಕಾರಿ ಕೆ.ರಾಮರಾಜನ್, ಜಿ.ಪಂ. ಮುಖ್ಯಕಾರ್ಯನಿರ್ವಹಣಾಧಿಕಾರಿ ವರ್ಣಿತ್ ನೇಗಿ ಇತರರು ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ಇದೇ ಸಂದರ್ಭ ಮಡಿಕೇರಿ ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆ ಬಳಿ ಖ್ಯಾತ ಮರಳು ಕಲಾವಿದೆ ಎಂ.ಎನ್.ಗೌರಿ ರಚಿಸಿರುವ ವನದೈವ ಮರಳು ಕಲಾಕೃತಿ ಮತ್ತು ಮಡಿಕೇರಿ ದಸರಾ ಫೋಟೋ ಪಾಯಿಂಟ್ ಅನ್ನು ಗಣ್ಯರು ಉದ್ಘಾಟಿಸಲಿದ್ದಾರೆ.