

ಆನೇಕಲ್ : ಪಟ್ಟಣದ ತೊಗಟವೀರ ಜನಾಂಗದವರು ಆಚರಣೆ ಮಾಡಿಕೊಂಡು ಬರುತ್ತಿರುವ ಶ್ರೀಚೌಡೇಶ್ವರಿ ಅಮ್ಮನವರ ದಸರಾ ಆನೆ ಅಂಬಾರಿ ಉತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಗುರುವಾರ ವಿಜೃಂಭಣೆಯಿಂದ ನೆರವೇರಿತು. ಚೌಡೇಶ್ವರಿ ದೇವಿ ಹೊತ್ತ ಶೇಖರನ್ ಹೆಸರಿನ ಆನೆಯು ಚೌಡೇಶ್ವರಿ ದೇವಾಲಯ ಮುಂಭಾಗದ ವೇದಿಕೆ ಬಳಿ ಬಂದಾಗ ಗಣ್ಯರು ಅಂಬಾರಿಗೆ ಪುಷ್ಪಾರ್ಚನೆ ಮಾಡಿ ದೇವಿಯ ಆಶೀರ್ವಾದ ಪಡೆದರು, ಕಲಾತಂಡಗಳು ವೇದಿಕೆ ಬಳಿ ಪ್ರದರ್ಶನ ತೋರಿದ ಬಳಿಕ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅಂಬಾರಿ ಮೆರವಣಿಗೆ ಸಾಗಿತು. ಮೈಸೂರು ದಸರಾ ಹೋಲುವ ರಾಜ್ಯದಲ್ಲೇ ಎರಡನೇ ಮೈಸೂರು ದಸರಾ ಖ್ಯಾತಿಯ ಪಟ್ಟಣದ ತಿಲಕ್ ವೃತ್ತದಲ್ಲಿನ ಚೌಡೇಶ್ವರಿ ದೇವಾಲಯದಲ್ಲಿ ವಿಜಯದಶಮಿ ಅಂಗವಾಗಿ 9 ದಿನ ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಮ ನಡೆದವು.
ಅಮ್ಮನವರಿಗೆ ವಿಶೇಷ ಅಲಂಕಾರ: ಚೌಡೇಶ್ವರಿ ದೇವಾಲಯದಲ್ಲಿ ದೇವಿಗೆ ನವರಾತ್ರಿ ದಿನಗಳಲ್ಲಿ ವಿಶೇಷ ಅಲಂಕಾರ ಮಾಡಿ, ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಂಟಾ, ಸಿದ್ಧಿಧಾತ್ರಿ, ಕೂಷ್ಮಂಡ, ಸ್ಕಂದಮಾತ, ಕಾತ್ಯಾಯಿನಿ, ಸರಸ್ವತಿ, ಕಾಳರಾತ್ರಿ, ಮಹಾಗೌರಿ ಅಲಂಕಾರ ಮಾಡಿದ್ದು, ಪ್ರತಿ ದಿನ ಸಾವಿರಾರು ಜನ ದರ್ಶನ ಪಡೆದರು. ಗುರುವಾರ ವಿಜಯದಶಮಿಯಂದು ಅಮ್ಮನವರ ದರ್ಶನಕ್ಕೆ ಭಕ್ತರು ಕಿಲೋ ಮೀಟರ್ಗಟ್ಟಲೆ ಸಾಲುಗಟ್ಟಿ ನಿಂತಿದ್ದರು. ಪುರಸಭಾ ಮಾಜಿ ಅಧ್ಯಕ್ಷ ಎನ್.ಎಸ್.ಪದ್ಮನಾಭ, ಶ್ರೀಚೌಡೇಶ್ವರಿ ಸೇವಾ ಸಮಿತಿ ಗೌರವ ಅಧ್ಯಕ್ಷ ನಾಗರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಗೌಡ, ಕಾಂಗ್ರೆಸ್ ಟೌನ್ ಅಧ್ಯಕ್ಷ ಬಿ. ಗೋಪಾಲ್, ಪುರಸಭಾ ಉಪಾಧ್ಯೆ ಭುವನಾ ದಿನೇಶ್, ಸದಸ್ಯರಾದ ರಾಜೇಂದ್ರ ಪ್ರಸಾದ್, ಮುನಾವರ್, ಶ್ರೀಕಾಂತ್, ಮಹಂತೇಶ್, ಕವಿತಾ, ಮಹಿಳಾ ಮುಖಂಡರಾದ ನಾಗವೇಣಿ, ಶ್ರೀನಿವಾಸ್ ಇದ್ದರು.
ಮಾದರಿ ಉತ್ಸವ : ಮೌಲ್ಯವನ್ನು ಮೈಗೂಡಿಸಿಕೊಳ್ಳದೇ ಹೋದರೆ ದೇಶದಲ್ಲಿ ಒಳ್ಳೆಯ ಯುವ ಪೀಳಿಗೆಯನ್ನು ಮುಂದೆ ತರಲು ಸಾಧ್ಯವಿಲ್ಲ, ದಸರಾ ಉತ್ಸವ ಎಲ್ಲ ಊರಿನ ಜನರ ಕಾರ್ಯಕ್ರಮ ಆಗಬೇಕು, ಆನೇಕಲ್ ವಿಜಯದಶಮಿ ಉತ್ಸವ ರಾಜ್ಯದಲ್ಲಿಯೇ ಪ್ರಸಿದ್ದಿ ಪಡೆದಿದೆ, ಚೌಡೇಶ್ವರಿ ದೇವಾಲಯ ಸೇವಾ ಸಮಿತಿಯು ಹಲವು ವರ್ಷಗಳಿಂದ ಉತ್ಸವವನ್ನು ಮೈಸೂರು ದಸರೆಯ ಮಾದರಿಯಲ್ಲಿ ಆಚರಿಸಿಕೊಂಡು ಬರುತ್ತಿರುವುದು ಮಾದರಿ ಎನಿಸಿದೆ ಎಂದು ಶಾಸಕ ಬಿ.ಶಿವಣ್ಣ ಹೇಳಿದರು.
ಕಟ್ಟಡಗಳ ಮೇಲೆ ಜನಸಾಗರ : ಆನೇಕಲ್ ದಸರಾ ಉತ್ಸವಕ್ಕೆ ತಮಿಳುನಾಡು ಸೇರಿ ಕರ್ನಾಟಕದ ಮೂಲೆ ಮೂಲೆಗಳಿಂದ ಜನ ಆಗಮಿಸಿದ್ದು, ಕಟ್ಟಡಗಳ ಮೇಲೆಲ್ಲ ನಿಂತು ಜನ ಅಂಬಾರಿ ಉತ್ಸವ ಕಣ್ತುಂಬಿಕೊಂಡರು. ಅಂಬಾರಿ ಉತ್ಸವದ ವೇಳೆ ನೂಕುನುಗ್ಗಲು ಉಂಟಾಗಿತ್ತು. ಜನರನ್ನು ನಿಯಂತ್ರಿಸಲು ಪೊಲೀಸರು ಹಾಗೂ ಸ್ಕೌಟ್ಸ್ ವಿದ್ಯಾರ್ಥಿಗಳು ಪರದಾಡಬೇಕಾಯಿತು. ಅಡಿಷನಲ್ ಎಸ್.ಪಿ ನಗಾರಾಜ್, ಡಿವೈಎಸ್ಪಿ ಮಹೋನ್ ಕುಮಾರ್, ಸಿ.ಪಿ.ಐ ತಿಮ್ಮೆಸ್ವಾಮಿ ಹಾಗೂ ರಾವ್ ಗೌಡ ಸೇರಿ 300ಜನಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿತ್ತು.
ಜೀವನ ಬಹಳ ಚಿಕ್ಕದು, ನಮಗೆ ಜನ್ಮ ನೀಡಿದ ತಾಯಿ&ತಂದೆಗೆ ಗೌರವ ನೀಡಬೇಕು, ದಸರಾ ಎಂದರೆ ನಮ್ಮಲ್ಲಿನ ಕೆಟ್ಟ ಗುಣಗಳನ್ನು ದೂರ ಮಾಡಬೇಕು ಎಂದು ದೇವರಲ್ಲಿ ಬೇಡಬೇಕು. ದೇವರನ್ನು ಪೂಜಿಸುವುದು ನಾವೆಲ್ಲರೂ ಚೆನ್ನಾಗಿ ಜೀವನ ನಡೆಸಬೇಕು ಎನ್ನುವ ಕಾರಣದಿಂದ. ಕಷ್ಟಪಟ್ಟು ದುಡಿದು ಜೀವನ ನಡೆಸಬೇಕು, ದೇವರು ಎಲ್ಲವನ್ನು ಕೊಡುತ್ತಾನೆ ಎಂದು ಸುಮ್ಮನಿರಬಾರದು. > ದಿವ್ಯಜ್ಞಾನಾನಂದಗಿರಿ ಸ್ವಾಮೀಜಿ ದೊಡ್ಡಬಳ್ಳಾಪುರದ ಪುಷ್ಪಾಂಡಜ ಮುನಿ ಗುರುಪೀಠ ಮೈಸೂರು ದಸರಾ ಉತ್ಸವದ ಮಾದರಿಯಲ್ಲಿ ಆನೇಕಲ್ ತಾಲೂಕಿನಲ್ಲಿ ದಸರಾ ಉತ್ಸವ ನೋಡಲು ಜನ ಸಾಗರವೇ ಬಂದಿದೆ. ಪ್ರತಿ ವರ್ಷ ಜನಸಾಗರ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜನತೆಯ ಜೊತೆಗೆ ಸ್ಥಳಿಯ ಜನಪ್ರತಿನಿಧಿಗಳು, ಸಂ ಸಂಸ್ಥೆಗಳು ಉತ್ಸವದ ಸಂದರ್ಭದಲ್ಲಿ ಸಹಕಾರ ನೀಡಿವೆ. > ಶ್ರೀನಿವಾಸ್ ಚೌಡೇಶ್ವರಿ ತೊಗಟವೀರ ಕ್ಷತ್ರಿಯ ಸಂದ ಅಧ್ಯಕ್ಷ