

ಮೈಸೂರು: ದಸರಾದ ಅಂತಿಮ ದಿನ ನಡೆಯುವ ಆಕರ್ಷಕವಾದ ವಿಖ್ಯಾತ ಜಂಬೂಸವಾರಿ ಮೆರವಣಿ ಕಣ್ತುಂಬಿಕೊಳ್ಳಬೇಕು ಎಂದು ಬಂದವರಿಗೆ ಎನ್‌ಸಿಸಿ ಕೆಡೆಟ್‌ಗಳು ಹಾಗೂ ಮೆರವಣಿಗೆ, ಸ್ತಬ್ಧಚಿತ್ರ, ಸ್ವಚ್ಛತೆ ಸೇರಿದಂತೆ ವಿವಿಧ ಸಮಿತಿಯವರು ಅಡ್ಡಿಯಾದರು. ಮೆರವಣಿಗೆಯನ್ನು ಹತ್ತಿರದಿಂದ ನೋಡಬೇಕು ಎಂದು ಬಂದು ಬಿಸಿಲು, ಮಳೆಯಲ್ಲಿಯೂ ಜನರು ಕಾಯ್ದಿದ್ದರು. ಆದರೆ ಮೆರವಣಿಗೆ ಆರಂಭಗೊಳ್ಳುತ್ತಿದ್ದಂತೆಯೇ ಮಳೆ ಸುರಿದಿದ್ದು, ಕೊಂಚ ನಿರಾಸೆ ತರಿಸಿತು. ಮೆರವಣಿಗೆ ಸಾಗುವ ದಾರಿಯಲ್ಲಿ ಜನರಿಗೆ ಅಡ್ಡಲಾಗಿ ಅಗತ್ಯಕ್ಕಿಂತ ಹೆಚ್ಚಿನ ಎನ್‌ಸಿಸಿ ಕೆಡೆಟ್‌ಗಳು, ಮೆರವಣಿಗೆ, ಸ್ತಬ್ಧಚಿತ್ರ, ಸ್ವಚ್ಛತೆ ಸೇರಿದಂತೆ ನಾನಾ ಸಮಿತಿ ಸದಸ್ಯರು, ರಾಜಕೀಯ ಪುಡಾರಿಗಳು ನಿಂತಿದ್ದರು. ಅಲ್ಲದೇ ಕೆಲವರು ಮುಂದೆ ಹೋಗಿ ತಮ್ಮ ಮೊಬೈಲ್‌ನಲ್ಲಿ ಸೆಲ್ಫಿ ತೆಗೆದುಕೊಂಡರೆ, ಛಾಯಾಗ್ರಾಹಕರು ಎಂದು ಟ್ಯಾಗ್ ಹಾಕಿಕೊಂಡು ಅತ್ತಿಂದ ಇತ್ತ, ಇತ್ತಿಂದ ಅತ್ತ ಓಡಾಡುವವರ ಸಂಖ್ಯೆಗೂ ಕಡಿಮೆ ಇರಲಿಲ್ಲ. ಹೀಗಾಗಿ ಜಂಬೂಸವಾರಿ ಮೆರವಣಿಗೆ ನೋಡಲು ಬಂದವರು ಬೇಸರ ವ್ಯಕ್ತಪಡಿಸಿದರು.