ವಸಂತನರಸಾಪುರಕ್ಕೆ ಹರಿಯಲ್ಲ ಎತ್ತಿನಹೊಳೆ ; ಮಂಜೂರಾಗಿದ್ದ ನೀರಿಗೂ ಕೊಕ್ಕೆ

century-eco-solutions-02
Published on

ತುಮಕೂರು: ವಸಂತನರಸಾಪುರ ಕೈಗಾರಿಕಾ ಪ್ರದೇಶಕ್ಕೆ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯಿಂದ ನೀರು ಹಂಚಿಕೆ ಮಾಡಿದ್ದ ಆದೇಶವನ್ನು ರಾಜ್ಯ ಸರ್ಕಾರ ಹಿಂಪಡೆದಿದೆ.

ಕೈಗಾರಿಕಾವಲಯದಲ್ಲಿ ಬಂಡವಾಳಹೂಡಿಕೆದಾರರನ್ನು ಸೆಳೆಯಲು ಒಂದೆಡೆ ಪ್ರಯತ್ನ ನಡೆಯುತ್ತಿದ್ದರೆ ಕೈಗಾರಿಕಾಪ್ರದೇಶಗಳಲ್ಲಿ ಕನಿಷ್ಠ ಮೂಲಸೌಕರ್ಯ ಒದಗಿಸದೆ ಬಂಡವಾಳಹೂಡಿಕೆದಾರರನ್ನು ಆಹ್ವಾನಿಸಲು ಇದು ದೊಡ್ಡ ಹಿನ್ನಡೆಯಾಗಲಿದೆ. ತುಮಕೂರು ನಗರದಷ್ಟೇ ವಿಸ್ತೀರ್ಣವನ್ನು ವಸಂತನರಸಾಪುರ ಕೈಗಾರಿಕಾ ಪ್ರದೇಶ ಚಾಚಿಕೊಂಡಿದೆ.

ತುಮಕೂರು ತಾಲೂಕಿನ ವಸಂತನರಸಾಪುರದಲ್ಲಿ 12 ಸಾವಿರ ಎಕರೆ ಪ್ರದೇಶವನ್ನು ಭೂಸ್ವಾಧೀನಪಡಿಸಿಕೊಂಡಿರುವ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಹಂತ, ಹಂತವಾಗಿ ಅಭಿವೃದ್ಧಿ ಕೈಗೊಂಡಿದೆ. ಮೊದಲ 1, 2 ಹಾಗೂ 3ನೇ ಹಂತದಲ್ಲಿ 3800 ಎಕರೆ ಪ್ರದೇಶವನ್ನು ಅಭಿವೃದ್ಧಿಪಡಿಸಿದ್ದು ಸಣ್ಣ, ಮಧ್ಯಮ ಕೈಗಾರಿಕೆಗಳು ತಲೆಎತ್ತಿವೆ. ವಿದೇಶಿ ಕಂಪನಿಗಳು ಸಹ ಕೈಗಾರಿಕೆಗಳನ್ನು ಆರಂಭಿಸಿವೆ. ಸದ್ಯಕ್ಕೆ ಮೂಲಸೌಕರ್ಯ ಒದಗಿಸಿದ್ದು, ಕುಪ್ಪೂರು ಕೆರೆಯಿಂದ 0.02 ಟಿಎಂಸಿಯಷ್ಟು ಹೇಮೆ ನೀರನ್ನು ಒದಗಿಸಿದೆ. ವರ್ಷದಲ್ಲಿ 4 ತಿಂಗಳು ಹೇಮೆ ನೀರು ಪೂರೈಸಲಾಗುತ್ತಿದೆ.

ಕೇಂದ್ರ, ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ 4, 5 ಹಾಗೂ 6ನೇ ಹಂತದಲ್ಲಿ 8484 ಎಕರೆಯನ್ನು ಕೆಎಐಡಿಬಿ ಅಭಿವೃದ್ಧಿ ಪಡಿಸುತ್ತಿದ್ದು, ಬೃಹತ್ ಕೈಗಾರಿಕೆ ಸ್ಥಾಪಿಸಲು ಉದ್ದಿಮೆದಾರರು ಉತ್ಸುಕರಾಗಿದ್ದಾರೆ. ಆದರೆ, ವಸಂತನರಸಾಪುರದಲ್ಲಿ ತಲೆದೋರಿರುವ ನೀರಿನ ಸಮಸ್ಯೆ ಕೈಗಾರಿಕೋದ್ಯಮಿಗಳ ಉತ್ಸಾಹಕ್ಕೆ ಬ್ರೇಕ್ ಹಾಕಿದೆ. ಸದ್ಯಕ್ಕೆ ಹೇಮೆ ನೀರನ್ನು ಬಳಸಲಾಗುತ್ತಿದೆಯಾದರೂ ಜಿಲ್ಲಾಕೇಂದ್ರ ತುಮಕೂರಿನಲ್ಲಿ ಜನಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರುವುದರಿಂದ ಮುಂದಿನ ದಿನಗಳಲ್ಲಿ ಕೈಗಾರಿಕಾ ಪ್ರದೇಶಕ್ಕೆ ಹೇಮೆ ನೀರು ಹರಿಸಲು ಕಡಿವಾಣ ಬೀಳುವ ಸಾಧ್ಯತೆ ಇದೆ.

ಎತ್ತಿನಹೊಳೆ ನೀರು: ಚೆನ್ನೈ-ಬೆಂಗಳೂರು-ಚಿತ್ರದುರ್ಗ ಕೈಗಾರಿಕಾ ಕಾರಿಡಾರ್‌ಗೆ ಪೂರಕವಾಗಿ ವಸಂತನರಸಾಪುರ ಕೈಗಾರಿಕಾ ಪ್ರದೇಶವನ್ನು ಅಭಿವೃದ್ಧಿ ಪಡಿಸುವ ಹಿನ್ನೆಲೆಯಲ್ಲಿ ಹೇಮೆ ಜತೆಗೆ ಎತ್ತಿನಹೊಳೆ ಯೋಜನೆಯಿಂದ ನೀರು ಕೊಡಲು ಸರ್ಕಾರ ಮುಂದಾಗಿದ್ದು ಜಲಸಂಪನ್ಮೂಲ ಇಲಾಖೆಯಿಂದ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಗೆ ನೀರನ್ನು ಕೊಡುವುದಾಗಿ ಆದೇಶ ಹೊರಡಿಸಲಾಗಿತ್ತು. ಆದರೆ, ಈ ಆದೇಶವನ್ನು ಮಾರ್ಚ್‌ನಲ್ಲಿ ಹಿಂಪಡೆದಿದ್ದು ಕೈಗಾರಿಕೋದ್ಯಮಿಗಳ ಕೆಂಪು ಹಾಸಿನ ಸ್ವಾಗತಕ್ಕೆ ಪೆಟ್ಟು ಬೀಳಲಿದೆ.

ದೇವನಹಳ್ಳಿ ಕೈಗಾರಿಕಾ ಪ್ರದೇಶಕ್ಕೆ ಎತ್ತಿನಹೊಳೆ ಕುಡಿಯುವ ನೀರಿನ ಸಮಗ್ರ ಯೋಜನೆ ಅಡಿ 1 ಟಿಎಂಸಿ ಹಾಗೂ 300 ಎಂಸಿಎಫ್‌ಟಿ ನೀರನ್ನು ವಸಂತನರಸಾಪುರ ಕೈಗಾರಿಕಾ ಪ್ರದೇಶಕ್ಕೆ ಹಂಚಿಕೆ ಮಾಡಿ ಹೊರಡಿಸಿದ್ದ ಆದೇಶವನ್ನು ಮಾರ್ಚ್‌ನಲ್ಲಿ ಹಿಂದಕ್ಕೆ ಪಡೆದಿರುವುದು ಕೈಗಾರಿಕಾವಲಯ ಅಭಿವೃದ್ಧಿ ಹಿನ್ನಡೆಯಾಗಲಿದೆ.

ಸಂಸ್ಕರಿಸಿದ ತ್ಯಾಜ್ಯ ನೀರು ಪೂರೈಕೆಗೆ 100 ಕೋಟಿ ರೂಪಾಯಿ: ತುಮಕೂರು ಹೊರವಲಯದ ಭೀಮಸಂದ್ರ ಕೆರೆ ಬಳಿಯ ಕೊಳಚೆ ನೀರು ಶುದ್ಧೀಕರಣ ಘಟಕದಿಂದ ಶುದ್ಧೀಕರಿಸಿದ 30 ಎಂಎಲ್‌ಡಿ ತ್ಯಾಜ್ಯ ನೀರನ್ನು ವಸಂತನರಸಾಪುರ ಕೈಗಾರಿಕಾ ಪ್ರದೇಶಗಳಿಗೆ ಪೂರೈಸುವ 100 ಕೋಟಿ ರೂ., ವೆಚ್ಚದ ಬೃಹತ್ ಯೋಜನೆಯ ವಿಸ್ತೃತ ಯೋಜನಾ ವರದಿ (ಡಿಪಿಆರ್)ಯನ್ನು ಕೆಐಎಡಿಬಿ ಸಿದ್ಧಪಡಿಸಿದೆ. ಆದರೆ, ಕರೊನಾ ಸಂಕಷ್ಟ ಸಂದರ್ಭದಲ್ಲಿ ಈ ಯೋಜನೆಗೆ ಹಣ ಒದಗಿಸುವುದು ಕಷ್ಟ ಸಾಧ್ಯವಾಗಲಿದೆ. ಹಾಗಾಗಿ, ಈ ಯೋಜನೆ ಕೈಗೂಡುವ ಸಾಧ್ಯತೆಗಳು ಕಡಿಮೆ.

ಮುಖ್ಯಮಂತ್ರಿಗೆ ಜಿಎಸ್ಬಿ ಪತ್ರ: ಎತ್ತಿನಹೊಳೆ ಯೋಜನೆಯಿಂದ 300 ಎಂಸಿಎಫ್‌ಟಿ ನೀರನ್ನು ಈ ಹಿಂದೆ ವಸಂತನರಸಾಪುರಕ್ಕೆ ಹಂಚಿಕೆ ಮಾಡಲಾಗಿದ್ದು, ಈ ಆದೇಶವನ್ನು ಸೂಕ್ತ ಕಾರಣ ನೀಡದೆ ಹಿಂಪಡೆಯಲಾಗಿದೆ. ಸಿಎಂ ಯಡಿಯೂರಪ್ಪ ಮಧ್ಯಪ್ರವೇಶಿಸಿ ಆದೇಶ ರದ್ದುಪಡಿಸಿ ಕೈಗಾರಿಕೆಗೆ ನೀರು ನೀಡುವಂತೆ ಸಂಸದ ಜಿ.ಎಸ್.ಬಸವರಾಜು ಪತ್ರ ಬರೆದು ಮನವಿ ಮಾಡಿದ್ದಾರೆ. ಈ ಹಿಂದೆ ಜಲಸಂಪನ್ಮೂಲ ಇಲಾಖೆಯು ನೀರು ಹಂಚಿಕೆ ಮಾಡಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಆದೇಶ ಕೂಡ ಹೊರಡಿಸಿತ್ತು. ಆದರೆ, ಮಾರ್ಚ್‌ನಲ್ಲಿ ಈ ಆದೇಶ ಹಿಂಪಡೆದಿದ್ದು 300 ಎಂಸಿಎಫ್‌ಟಿ ನೀರನ್ನು ಎಲ್ಲಿಗೆ ಹಂಚಿಕೆ ಮಾಡಲಾಗಿದೆ ಎಂಬ ಪ್ರಶ್ನೆ ಉದ್ಭವಿಸಿದೆ. ಬಂಡವಾಳಹೂಡಿಕೆದಾರರನ್ನು ಸೆಳೆಯಲು ಕನಿಷ್ಠ ಸೌಕರ್ಯಗಳಾದ ವಿದ್ಯುತ್, ಜಾಗದ ಜತೆ ನೀರು ಅತ್ಯಗತ್ಯ. ಸದ್ಯ ಕುಪ್ಪೂರು ಕೆರೆಯಿಂದ 0.02 ಟಿಎಂಸಿ ನೀರು ಒದಗಿಸಲಾಗಿದೆ. ಇದು ಎಲ್ಲಿಗೂ ಸಾಲುವುದಿಲ್ಲ. ಹಾಗಾಗಿ, ಎತ್ತಿನಹೊಳೆ ಯೋಜನೆಯಿಂದ 0.03 ಟಿಎಂಸಿ ನೀರನ್ನು ನೀಡುವಂತೆ ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಕರೊನಾಘಾತದಿಂದ ಕೈಗಾರಿಕೆ ವಲಯ ತತ್ತರಿಸಿದೆ. ದಿನೇದಿನೆ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದೆ. ಕರೊನಾ ಪೀಡಿತ ಚೀನಾದಿಂದ ಹೊರಬರಲು ತುದಿಗಾಲ ಮೇಲೆ ನಿಂತಿರುವ ಕೈಗಾರಿಕೋದ್ಯಮಿಗಳನ್ನು ರಾಜ್ಯಕ್ಕೆ ಆಹ್ವಾನಿಸುವ ನಿಟ್ಟಿನಲ್ಲಿ ಮೂಲಸೌಕರ್ಯ ಒದಗಿಸುವುದು ಅನಿವಾರ್ಯ. ರಾಜ್ಯ ಸರ್ಕಾರವು ಎಚ್ಚೆತ್ತುಕೊಂಡು ವಸಂತನರಸಾಪುರ ಕೈಗಾರಿಕಾ ಪ್ರದೇಶನಕ್ಕೆ ಎತ್ತಿನಹೊಳೆ ನೀರನ್ನು ಒದಗಿಸಬೇಕು. ಕುಂದರನಹಳ್ಳಿ ರಮೇಶ್ ಅಧ್ಯಕ್ಷ, ಅಭಿವೃದ್ಧಿ ಫೋರಂ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net