ಸಂವಿಧಾನದ ಹಕ್ಕುಗಳಂತೆ ಕರ್ತವ್ಯವನ್ನೂ ಪಾಲಿಸಿ

26 kpp 01
Published on

ಕೊಪ್ಪ: ಉತ್ತಮ ಹಾಗೂ ಬಲಿಷ್ಠ ರಾಷ್ಟ್ರ ನಿರ್ಮಾಣ ಮಾಡುವುದು ಹಾಗೂ ಎಲ್ಲ ವರ್ಗದ ಜನರ ಹಿತಾಸಕ್ತಿ, ದೇಶದ ಸರ್ವಾಂಗೀಣ ಅಭಿವೃದ್ಧಿಗಾಗಿ ಡಾ. ಬಿ.ಆರ್.ಅಂಬೇಡ್ಕರ್ ನೇತೃತ್ವದಲ್ಲಿ ನಮ್ಮ ಸಂವಿಧಾನ ರಚನೆಯಾಗಿ ಸಮರ್ಪಿಸಿಕೊಂಡ ಈ ದಿನ ಪವಿತ್ರ ದಿನ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.

ಪಟ್ಟಣದ ಲಾಲ್ಬಹದ್ದೂರ್ ಶಾಸ್ತ್ರಿ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ದೇಶದ ಅಭಿವೃದ್ಧಿಗಾಗಿ ಮೂಲಭೂತ ಹಕ್ಕುಗಳಂತೆ ಕರ್ತವ್ಯಗಳನ್ನೂ ಪಾಲಿಸಬೇಕು. ಭಾರತೀಯರಿಗೆ ರಾಜಕೀಯ, ಸಾಮಾಜಿಕ, ಆರ್ಥಿಕ ನ್ಯಾಯ ನೀಡಿ ಸಮಾನತೆಯಿಂದ ಕಾಣುವಂತೆ ಮಾಡಿದ ಧೀಮಂತ ವ್ಯಕ್ತಿತ್ವ ಅಂಬೇಡ್ಕರ್‌ಎಂದರು.

ಸರ್ಕಾರ ಶಾಲೆಗಳಲ್ಲಿ ಸಂವಿಧಾನ ಪೀಠಿಕೆ ಓದಿಸುವ ಮೂಲಕ, ಜಾಗೃತಿ ಜಾಥಾ ಮೂಲಕ ಸಂವಿಧಾನದ ಅಂಶಗಳಿಗೆ ಒತ್ತು ನೀಡಿದೆ. ಕರೊನಾ ಸಂದರ್ಭದಲ್ಲಿ ಸಮಸ್ಯೆ ಎದುರಿಸಿದ ಜನರ ಕಷ್ಟ ನಿವಾರಿಸಲು, ಸಮಾಜದ ಕಟ್ಟ ಕಡೆ ಜನರನ್ನು ಸಬಲರನ್ನಾಗಿ ಮಾಡುವ ಉದ್ದೇಶದಿಂದ ಪಂಚ ಗ್ಯಾರಂಟಿ ಯೋಜನೆ ಜಾರಿಗೆ ತಂದಿದೆ ಎಂದು ತಿಳಿಸಿದರು.

ತಹಸೀಲ್ದಾರ್ ಲಿಖಿತಾ ಮೋಹನ್ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಗಣರಾಜ್ಯೋತ್ಸವವನ್ನು ಅರ್ಥ ಪೂರ್ಣವಾಗಿ ಆಚರಿಸಬೇಕಾಗಿರುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ. ನಾವು ಸಂವಿಧಾನದ ಮಹತ್ವ ಅರಿಯಬೇಕಿದೆ ಎಂದರು.

ಪಶು ಇಲಾಖೆ ಮಾಹಿತಿ ಕೈಪಿಡಿಯನ್ನು ಶಾಸಕ ರಾಜೇಗೌಡ ಬಿಡುಗಡೆ ಮಾಡಿದರು. ಪಪಂ ನಾಮ ನಿರ್ದೇಶಿತ ಸದಸ್ಯ ಮಹಮ್ಮದ್ ಗೌಸ್, ಸುಮಾ, ಎಸ್‌ಐ ಮಂಜು, ಮುಖ್ಯಾಧಿಕಾರಿ ಚಂದ್ರಕಾಂತ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net