

ಮುದ್ದೇಬಿಹಾಳ: ತಾಲೂಕಿನ ಅಡವಿ ಹುಲಗಬಾಳದಿಂದ ತಾಂಡಾ ಸಂಪರ್ಕಿಸುವ ಸೇತುವೆ ಕೊಚ್ಚಿ ಹೋಗಿದ್ದನ್ನು ಕೇಂದ್ರ ಅಧ್ಯಯನ ತಂಡದ ಅಧಿಕಾರಿಗಳು ಗುರುವಾರ ವೀಕ್ಷಿಸಿದರು.
ನಂತರ ಹುಲಗಬಾಳ ತಾಂಡಾ ನಿವಾಸಿಗಳಿಂದ ಅಹವಾಲು ಆಲಿದರು. ತಂಡದಲ್ಲಿದ್ದ ಕೇಂದ್ರದ ಕೃಷಿ ಸಚಿವಾಲಯದ ನಿರ್ದೇಶಕ ಡಾ.ಕೆ. ಮನೋಹರನ್, ಗ್ರಾಮೀಣಾಭಿವೃದ್ಧಿ ಸಚಿವಾಲಯದ ಅಧೀನ ಕಾರ್ಯದರ್ಶಿ ಎಸ್.ಬಿ. ತಿವಾರಿ ಗ್ರಾಮಸ್ಥರ ಸಮಸ್ಯೆಗಳನ್ನು ಟಿಪ್ಪಣಿ ಮಾಡಿಕೊಂಡರು.
ಪ್ರತಿ ವರ್ಷ ಮಳೆಯಾದರೆ ಭಾರಿ ಪ್ರಮಾಣದಲ್ಲಿ ನೀರು ಬರುತ್ತದೆ. ಇದರಿಂದ ನಾವು ಓಡಾಡಲು ಸಂಪರ್ಕ ಹೊಂದಿದ ಈ ಸೇತುವೆ ಬಂದ್ ಆಗುತ್ತದೆ. ಎರಡು ವರ್ಷಗಳ ಹಿಂದೆ ದುರಸ್ತಿ ಮಾಡಿದ್ದ ಈ ಸೇತುವೆ ಇದೀಗ ಕೊಚ್ಚಿ ಹೋಗಿದ್ದು, ಅದನ್ನು ಮರು ನಿರ್ಮಿಸುವಂತೆ ನಿವಾಸಿಗಳು ಮನವಿ ಮಾಡಿದರು.
ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಅವರು ಗ್ರಾಮಸ್ಥರ ಅಹವಾಲು ಆಲಿಸಿದರಲ್ಲದೆ, ಅಡವಿ ಹುಲಗಬಾಳ ಸೇತುವೆ ಮರುನಿರ್ಮಾಣಕ್ಕೆ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಶೀಘ್ರ ಕಳಿಸಿಕೊಡಲಾಗುತ್ತದೆ. ಅಲ್ಲಿಯವರೆಗೂ ನೀರಿನ ಹರಿವು ಇಳಿಮುಖವಾದ ಬಳಿಕ ತಾತ್ಕಾಲಿಕ ದುರಸ್ತಿ ಬಗ್ಗೆ ಅಡವಿ ಹುಲಗಬಾಳ ತಾಂಡಾದ ಜನರಿಗೆ ತಿರುಗಾಡಲು ಪಯಾರ್ಯ ರಸ್ತೆ ಇದ್ದರೆ ಅದನ್ನು ತ್ವರಿತವಾಗಿ ವ್ಯವಸ್ಥೆ ಮಾಡುವಂತೆ ಪಿಆರ್‌ಇಡಿ, ಗ್ರಾಪಂ ಇಲಾಖೆಯವರಿಗೆ ಸೂಚಿಸಿದ್ದೇವೆ ಎಂದು ತಿಳಿಸಿದರು.
ಉಪ ವಿಭಾಗಾಧಿಕಾರಿ ಕ್ಯಾ.ಮಹೇಶ ಮಾಲಗತ್ತಿ, ತಾಪಂ ಇಒ ಎಸ್.ವೈ. ಹೊಕ್ರಾಣಿ, ಕಂದಾಯ ನಿರೀಕ್ಷಕ ನಿಂಗಣ್ಣ ದೊರೆ ಇತರರಿದ್ದರು.