

ಮುಂಡರಗಿ: ಪಟ್ಟಣದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಕನ್ನಡ ಸಾಹಿತ್ಯ ಪರಿಷತ್ ಭವನ ಕಟ್ಟಡ ಕಾಮಗಾರಿಯನ್ನು ಮಾಜಿ ಸಚಿವ ಎಸ್.ಎಸ್. ಪಾಟೀಲ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿ, ಕಸಾಪ ತಾಲೂಕು ಘಟಕದ ಪದಾಧಿಕಾರಿಗಳೊಂದಿಗೆ ಚರ್ಚಿಸಿದರು. ಬಳಿಕ ಮಾತನಾಡಿ, ಸಾಹಿತ್ಯಾಭಿಮಾನಿಗಳಿಂದ ದೇಣಿಗೆ ಸಂಗ್ರಹಿಸಿ ಕಸಾಪ ಭವನ ನಿರ್ಮಿಸುತ್ತಿರುವುದು ಹೆಮ್ಮೆಯ ಸಂಗತಿ. ಈ ಕಟ್ಟಡಕ್ಕೆ ಶಾಸಕರು, ಸಚಿವರು ಅನುದಾನ ನೀಡಬೇಕು. ನಾನು 1 ಲಕ್ಷ ರೂ. ದೇಣಿಗೆ ಸಲ್ಲಿಸುವುದಾಗಿ ಹೇಳಿದ್ದೆ. ಅದರಂತೆ ಈಗಾಗಲೇ ಮೂರು ಕಂತುಗಳಲ್ಲಿ ಒಟ್ಟು 75 ಸಾವಿರ ರೂ.ಗಳನ್ನು ನೀಡಿದ್ದು, ಉಳಿದ ಹಣ ಶೀಘ್ರದಲ್ಲೇ ನೀಡುತ್ತೇನೆ. ಎಲ್ಲ ಸಾಹಿತ್ಯಾಸಕ್ತರು ದೇಣಿಗೆ ನೀಡಿ, ಈ ಕಟ್ಟಡ ನಿರ್ಮಾಣ ಕಾರ್ಯ ಪೂರ್ಣಗೊಳಿಸಿ ಇಲ್ಲಿ ಸಾಹಿತ್ಯ ಚಟುವಟಿಕೆಗಳು ನಡೆಯಲು ಪ್ರೋತ್ಸಾಹಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದು ತಿಳಿಸಿದರು. ಕಸಾಪ ತಾಲೂಕಾಧ್ಯಕ್ಷ ಎಂ.ಜಿ. ಗಚ್ಚಣ್ಣವರ, ಗೌರವ ಕಾರ್ಯದರ್ಶಿ ಮಂಜುನಾಥ ಮುಧೋಳ, ಸಾಹಿತಿಗಳಾದ ಪ್ರೊ.ಆರ್.ಎಲ್. ಪೋಲೀಸಪಾಟೀಲ, ಶಂಕರ ಕುಕನೂರ, ಕೃಷ್ಣಮೂರ್ತಿ ಸಾಹುಕಾರ, ಎನ್.ಎನ್. ಕಲಕೇರಿ, ಶಂಕ್ರಪ್ಪ ಸೂರಪುರ, ಇತರರಿದ್ದರು.