

ಶಿವಮೊಗ್ಗ: ಅಶ್ಲೀಲ ವಿಡಿಯೋ ಪೆನ್‌ಡ್ರೈವ್ ಪ್ರಕರಣ ಅತ್ಯಂತ ಹೀನ ಕೃತ್ಯವಾಗಿದ್ದು, ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಆಗ್ರಹಿಸಿದರು.
ಕಾನೂನಿನ ಪ್ರಕಾರ ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು. ಅಂತಹ ಕೃತ್ಯಗಳನ್ನು ಯಾರೇ ಮಾಡಿದರೂ ತಪ್ಪು. ಆ ಪ್ರಕರಣದ ಬಗ್ಗೆ ಮಾತನಾಡುವುದಕ್ಕೂ ಅಸಹ್ಯ. ಎಸ್‌ಐಟಿ ತನಿಖಾಧಿಕಾರಿಗಳ ಮೇಲೆ ರಾಜ್ಯ ಸರ್ಕಾರದ ಪ್ರಭಾವ ಬೀರುವ ಸಾಧ್ಯತೆ ಇರುವುದರಿಂದ ಉನ್ನತ ತನಿಖೆಗೆ ವಹಿಸುವುದೇ ಸೂಕ್ತ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ ಕೊಲೆಯಾಯಿತು. ಬುಧವಾರ ಶಿವಮೊಗ್ಗದಲ್ಲಿ ಜೋಡಿ ಕೊಲೆಯಾಗಿದೆ. ಈ ರೀತಿ ಕೊಲೆಗಳು ನಿರಂತರವಾಗಿದ್ದು, ಜನರು ಆತಂಕದಲ್ಲೇ ಜೀವನ ನಡೆಸುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಜಿಪಂ ಮಾಜಿ ಸದಸ್ಯ ಕೆ.ಇ.ಕಾಂತೇಶ್, ಪಾಲಿಕೆ ಮಾಜಿ ಉಪ ಮೇಯರ್ ಗನ್ನಿ ಶಂಕರ್, ಚನ್ನಬಸಪ್ಪ, ಜಿ.ಬಾಲು ಸುದ್ದಿಗೋಷ್ಠಿಯಲ್ಲಿದ್ದರು.