

ಕೊರಲಕುಂಟೆ ತಿಪ್ಪೇಸ್ವಾಮಿ ಚಳ್ಳಕೆರೆ
ತಾಲೂಕಿನ ತುಮಲಿನಲ್ಲಿ ಸೆ.3ರಂದು ಆರಂಭವಾಗಲಿರುವ ಗೌರಸಮುದ್ರ ಮಾರಮ್ಮನ ಜಾತ್ರಾ ಮಹೋತ್ಸವಕ್ಕೆ ದೇವಿಯ ಮೂಲ ನೆಲೆಯಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಎರಡು ವಾರದ ನಂತರ ನಡೆಯಲಿರುವ ಮಾರಮ್ಮ ದೇವಿ ಜಾತ್ರೆಗೆ ಭಕ್ತರು ಕಟ್ಟುಪಾಡುಗಳನ್ನು ಅನುಸರಣೆ ಮಾಡಲು ಸಾರು ಹಾಕಲಾಯಿತು.
ಮಧ್ಯಾಹ್ನ ಮಾರಮ್ಮ ಎಂದೇ ಮಧ್ಯ ಕರ್ನಾಟಕದಲ್ಲಿ ಹೆಸರು ಪಡೆದಿರುವ ಗೌರಸಮುದ್ರ ಮಾರಮ್ಮನ ಜಾತ್ರೆ ಬುಡಕಟ್ಟು ಸಂಸ್ಕೃತಿ ಪದ್ಧತಿಯಲ್ಲಿ ಆಚರಣೆ ಮಾಡುವ ವಾಡಿಕೆ ಈಗಲೂ ಇದೆ.
ಗ್ರಾಮದಲ್ಲಿ ಸಾರುಕಟ್ಟೆ ಸಂಸ್ಥಾಪಕರಾಗಿರುವ 7 ಕೋಟಿ ತಳವಾರ ನಾಯಕರ ಸಮ್ಮುಖದಲ್ಲಿ ಜಾತ್ರೆಯ ಪೂರ್ವ ತಯಾರಿಗೆ ಸಭೆ ಬುಧವಾರ ನಡೆಯಿತು.
ಸಾರುಕಟ್ಟೆಗೆ ಸೇರುವ 12 ಸಮುದಾಯಗಳ ಕೈವಾಡದಾವರು ಭಾಗಿಯಾಗಿ ಮಾರಮ್ಮನ ಜಾತ್ರೆ ನಡೆಸಲು ಅಪ್ಪಣೆ ಕೋರಿದರು.
ಜಾತ್ರಾ ಕಾರ್ಯದ ಜವಾಬ್ದಾರಿ ನಿರ್ವಹಿಸುವ ನಮಗೆ ಏನು ಕೊಡುತ್ತೀರ ಎಂದು ಕೇಳಿಕೊಳ್ಳಲಾಯಿತು. ಇದಕ್ಕೆ ತಳವಾರರು ಧವಸ-ಧಾನ್ಯ ಮತ್ತು ಅಗತ್ಯ ಸಾಮಗ್ರಿಗಳು ಕೊಡಬೇಕಿದೆ ಎಂದು ಕೋರಿದರು.
ಗೌರಸಮುದ್ರ, ಹನುಮಂತನಹಳ್ಳಿ, ತಿಮ್ಲಾಪುರ, ಕೋನಸಾಗರ, ಓಬಣ್ಣನಹಳ್ಳಿ, ಕೂತ್ಲಾರಹಟ್ಟಿ, ಕೊಂಡ್ಲಹಳ್ಳಿ ಸೇರಿ ದೇವಿಯ ಆರಾಧಕರಿರುವ ಊರುಗಳಲ್ಲಿ ಎರಡು ವಾರಗಳ ಕಾಲ ಮನೆಗಳಲ್ಲಿ ಹೆಂಚು ಇಡಬಾರದು.
ಬಟ್ಟೆಗಳನ್ನು ಬದಲಿಸಬಾರದು. ಸ್ನಾನ ಮಾಡಬಾರದು ಎನ್ನುವ ಕಟ್ಟುಪಾಡುಗಳನ್ನು ಅನುಸರಿಸಬೇಕು. ಹೀಗೆ ನಡೆದುಕೊಳ್ಳುವ ಭಕ್ತರ ಗ್ರಾಮಗಳನ್ನು ದೇವಿ ಪ್ರವೇಶಿಸಿ ರಕ್ಷಿಸುತ್ತಾಳೆ. ಇದನ್ನು ಒಪ್ಪಿಕೊಂಡಿದ್ದೇವೆ ಎನ್ನುವುದಕ್ಕೆ ನಾವು ತಯಾರಿಸಿರುವ ಸಾರು ಬಳಸಿಕೊಂಡು ಊಟ ಮಾಡಬೇಕು ಎಂದು ಆಜ್ಞೆ ಮಾಡಿದರು.
ಬಳಿಕ ಸಾರುಕಟ್ಟೆಯ ತೀರ್ಮಾನದಂತೆ ತಳವಾರರು ತಯಾರಿಸಿದ ಸಾರು ಪ್ರತಿ ಮನೆಗಳಿಗೆ ಹಂಚಿ, ಡಂಗೂರ ಸಾರುವ ಮೂಲಕ ಇನ್ನೆರೆಡು ವಾರಗಳ ನಂತರ ನಡೆಯಲಿರುವ ಮಾರಮ್ಮ ದೇವಿ ಜಾತ್ರೆಗೆ ಹರಕೆಯಂತೆ ಹಿರಿಯರು ಮಾಡಿಕೊಂಡು ಬಂದಿರುವ ಪದ್ಧತಿಗಳನ್ನು ಅನುಸರಿಸಬೇಕು ಎಂದು ಜನರಿಗೆ ಸುದ್ದಿ ಮುಟ್ಟಿಸಲಾಯಿತು.
ತಳವಾರರು ಸೇರಿ ಗ್ರಾಮದ ಪ್ರತಿ ಸಮುದಾಯದ ಮುಖಂಡರು ಹಣ್ಣು-ಕಾಯಿ, ಹೂವು, ಪೂಜಾ ಸಾಮಗ್ರಿಗಳೊಂದಿಗೆ ದೇವಿಯ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ, ಈ ವರ್ಷದ ಜಾತ್ರಾ ಕಾರ್ಯವನ್ನು ಒಂದೊತ್ತಿನ ಹರಕೆಯಂತೆ ಭಕ್ತಿ ಸಮರ್ಪಿಸಿ, ಯಾವುದೇ ಲೋಪವಾಗದಂತೆ ಯಶಸ್ವಿ ಮಾಡಿಕೊಳ್ಳುತ್ತೇವೆ. ಇದಕ್ಕೆ ಕಂಕಣಬದ್ಧರಾಗಿದ್ದು, ನಿನ್ನ ಆಶೀರ್ವಾದ ಬೇಕು ಎಂದು ದೇವಿಯನ್ನು ಬೇಡಿಕೊಳ್ಳಲಾಯಿತು.
ನಗರಗಳಿಗೆ ಹೋಗುವ ಪರಿಪಾಟು ಇರುವವರು ಸಾರು ಹಾಕಿದ ದಿನವೇ ಐದಾರು ಧಿರಿಸುಗಳನ್ನು ಮೈಮೇಲೆ ಹಾಕಿಕೊಂಡು ಮತ್ತೆ ಬಿಚ್ಚಿಟ್ಟುಕೊಳ್ಳುತ್ತಾರೆ. ಈ ರೀತಿ ಹಾಕಿ ತೆಗೆದಿಟ್ಟುಕೊಂಡ ಬಟ್ಟೆಗಳನ್ನೇ ಎರಡು ವಾರಗಳ ಕಾಲ ಬಳಸುತ್ತಾರೆ. ಹಳ್ಳಿಯಲ್ಲಿ ಇರುವವರು ಧರಿಸಿದ ಒಂದೇ ಜತೆ ಬಟ್ಟೆಯಲ್ಲಿ ಮಾರಮ್ಮ ದೇವಿಯ ಜಾತ್ರೆ ಬರುವ ತನಕ ಅನುಸರಿಸುತ್ತಾರೆ.ಟಿ.ಶಶಿಕುಮಾರ್, ಗ್ರಾಪಂ ಸದಸ್ಯ, ಗೌರಸಮುದ್ರ