ಕತ್ತಲೆ, ಬೆಳಕಿನ ವಸ್ತುನಿಷ್ಠ ಬರವಣಿಗೆ

19
Published on

ಮೈಸೂರು: ನೀನೊಲಿದ ಬದುಕು ಕೃತಿಯಲ್ಲಿ ಜನಮುಖಿ, ಸಮಾಜಮುಖಿ ಚಿಂತನೆ ಅಡಗಿದೆ ಎಂದು ಹಿರಿಯ ವಿದ್ವಾಂಸ ನಾಡೋಜ ಡಾ.ಹಂಪ ನಾಗರಾಜಯ್ಯ ಹೇಳಿದರು.
ನಗರದ ಜೆಎಸ್‌ಎಸ್ ಆಸ್ಪತ್ರೆ ಆವರಣದ ಡಾ.ಶ್ರೀ ಶಿವರಾತ್ರಿ ರಾಜೇಂದ್ರ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಕಲಾಕೂಟ, ಸಂವಹನ ಪ್ರಕಾಶನ, ಸಪ್ನ ಬುಕ್ ಹೌಸ್ ಆಶ್ರಯದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಡಾ.ಸಿ. ಸೋಮಶೇಖರ್ ಅವರ ‘ನೀನೊಲಿದ ಬದುಕು’ ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು.


ಡಾ.ಸಿ.ಸೋಮಶೇಖರ್ ಅವರು ತಮ್ಮ ಕೃತಿಯಲ್ಲಿ ಕತ್ತಲೆ ಮತ್ತು ಬೆಳಕನ್ನು ವಸ್ತು ನಿಷ್ಠವಾಗಿ ಬರೆದಿದ್ದಾರೆ. ಈ ಕೃತಿ ಓದುವಾಗ ರೋಮಾಂಚನವಾಗುತ್ತದೆ ಎಂದು ತಿಳಿಸಿದರು.
ಎಲ್ಲ ಕಾಲದಲ್ಲೂ ಸಹೃದಯತೆ, ಮಾನವೀಯತೆಯನ್ನು ಕಳೆದುಕೊಳ್ಳದೆ ಅದನ್ನು ಜೀವಂತವಾಗಿ ಉಳಿಸಿಕೊಂಡು ಬಂದಿರುವ ಡಾ.ಸಿ.ಸೋಮಶೇಖರ್, ಸೇವೆಯಿಂದ ನಿವೃತ್ತರಾದರೂ ಜನರ ಹತ್ತಿರದಲ್ಲಿದ್ದುಕೊಂಡು ಕೆಲಸ ಮಾಡುತ್ತಿರುವುದು ಶ್ಲಾಘನೀಯ. ಸಾರ್ವಜನಿಕ ಜೀವನದಲ್ಲಿ ಇದ್ದಾಗ ಮಾನಸಿಕ ಆರೋಗ್ಯ ಕೆಡದಂತೆ ನೋಡಿಕೊಂಡಿದ್ದಾರೆ. ಕಷ್ಟದ ಮೆಟ್ಟಿಲುಗಳನ್ನು ಹಂತ ಹಂತವಾಗಿ ಹತ್ತಿಕೊಂಡು ಬಂದವರು. ಸಾಂಸ್ಕ ೃತಿಕ ರಾಯಭಾರಿಯಾಗಿ ಹೊರದೇಶಕ್ಕೆ ಯಾರನ್ನಾದರೂ ನೇಮಿಸಬೇಕು ಎನ್ನುವ ವಿಚಾರ ಬಂದಾಗ ಮೊದಲಿಗೆ ಡಾ.ಸಿ.ಸೋಮಶೇಖರ್ ಅವರ ಹೆಸರು ಬರುತ್ತದೆ. ಸೇವೆಯಲ್ಲಿ ಇದ್ದಾಗ ಸಮಾಜದಲ್ಲಿ ತುಳಿತಕೊಳ್ಳಗಾದವರ ಸಮಸ್ಯೆಗಳನ್ನು ಕೇಳಿ ನಗುತ್ತಲೇ ಅರ್ಧ ಕೆಲಸವನ್ನು ಪರಿಹರಿಸುತ್ತಿದ್ದರು ಎಂದು ಹೇಳಿದರು.

ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಮಾತನಾಡಿದರು. ರಾಮಕೃಷ್ಣ ಆಶ್ರಮದ ಅಧ್ಯಕ್ಷ ಶ್ರೀ ಸ್ವಾಮಿ ಮುಕ್ತಿದಾನಂದ ಮಹಾರಾಜ್, ಹೊಸಮಠದ ಶ್ರೀ ಚಿದಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಾಹಿತಿ ಡಾ.ಸಿ.ನಾಗಣ್ಣ, ನಾಡೋಜ ಕಮಲಾ ಹಂಪನಾ, ಸಾಹಿತಿ ಡಾ.ಲತಾ ರಾಜಶೇಖರ್, ಸಂವಹನ ಪ್ರಕಾಶನದ ಪ್ರಕಾಶಕ ಡಿ.ಎನ್.ಲೋಕಪ್ಪ, ಕೃತಿ ಲೇಖಕ ಡಾ.ಸಿ.ಸೋಮಶೇಖರ್, ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ.ಚಂದ್ರಶೇಖರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net