

ಬಂಕಾಪುರ: ಪೋಷಣ ಅಭಿಯಾನದ ಮೂಲಕ ಮಕ್ಕಳು, ಹದಿಹರೆಯದ ಯುವತಿಯರು, ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರಲ್ಲಿ ಅಪೌಷ್ಟಿಕತೆ ನಿವಾರಿಸಿ ಪೌಷ್ಟಿಕಾಂಶದ ಮಟ್ಟ ಸುಧಾರಿಸುವ ಗುರಿ ಹೊಂದಿದೆ ಎಂದು ಸಿಡಿಪಿಒ ಗಣೇಶ ಲಿಂಗಣ್ಣವರ ಹೇಳಿದರು.
ಪಟ್ಟಣದ ಫಕೀರೇಶ್ವರ ಸಭಾ ಭವನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಪೋಷಣ ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು.
ಪೋಷಣ ಕಾರ್ಯಕ್ರಮವು ಸಮುದಾಯದ ಒಳಗೊಳ್ಳುವಿಕೆ ಮತ್ತು ಸಂಬಂಧಿತ ಯೋಜನೆಗಳನ್ನು ಒಟ್ಟುಗೂಡಿಸಿ ಅಪೌಷ್ಟಿಕತೆ, ಕುಂಠಿತತೆ, ರಕ್ತಹೀನತೆ ಮತ್ತು ಕಡಿಮೆ ತೂಕದ ಶಿಶುಗಳ ಜನನ ಪ್ರಮಾಣ ಕಡಿಮೆ ಮಾಡಲು ಶ್ರಮಿಸುತ್ತದೆ ಎಂದರು.
ಜಿಲ್ಲಾ ನಿರೂಪಣಾಧಿಕಾರಿ ಶೈಲಜಾ ಕುರಹಟ್ಟಿ ಮಾತನಾಡಿ, ಸಮಾಜಕ್ಕೆ ಆರೋಗ್ಯವಂತ ಮಗು ನೀಡುವ ಉದ್ದೇಶದಿಂದ ಸರ್ಕಾರ ಮಾತೃಪೂರ್ಣ ಯೋಜನೆ, ಜನನಿ ಸುರಕ್ಷಾ ಯೋಜನೆ, ಮಾತೃವಂದನಾ ಯೋಜನೆ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ಗರ್ಭಿಣಿಯರು, ಬಾಣಂತಿಯರು ಅವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ ಎಂಟು ಗರ್ಭಿಣಿಯರಿಗೆ ಉಡಿ ತುಂಬುವ ಮತ್ತು ನಾಲ್ಕು ಮಕ್ಕಳಿಗೆ ಅನ್ನಪ್ರಾಶನ, ಒಂದು ಮಗುವಿಗೆ ನಾಮಕರಣ ಮತ್ತು ಒಂದು ಹೆಣ್ಣು ಮಗುವಿನ ಜನ್ಮ ದಿನಾಚರಣೆ ಮಾಡಲಾಯಿತು.
ಪುರಸಭೆ ಅಧ್ಯಕ್ಷೆ ಮಮತಾ ಮಾಗಿ, ಆಂಜನೇಯ ಗುಡಗೇರಿ, ಮಕಬುಲ್ ಬೊಮ್ಮನಹಳ್ಳಿ, ಮಂಜುನಾಥ ತಳವಾರ, ನಾಶೀರಅಹ್ಮದ ಹರ್ಡೆವಾಲೆ, ಸುರೇಶ ಕುರಗೊಡಿ, ಶೋಭಾ ಹಳವಳ್ಳಿ, ಗೀತಾ ದೇಸಾಯಿ, ರಾಜು ಬಡ್ಡಿ, ಶಿಲ್ಪಾ ಮುರಿಗೆಣ್ಣವರ, ಆರ್.ಎಂ. ಬೇಂದ್ರೆ, ಮಾಲಾ ಕುರುಂದವಾಡ, ಜಿ.ಎಸ್. ಸಕ್ರಿ, ಗೌರಮ್ಮ ಬನ್ನಿಮಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಅಂಗನವಾಡಿ ಕೇಂದ್ರಗಳ ಮೇಲ್ವಿಚಾರಕಿ ಸುಜಾತಾ ಜವಳಗೇರಿ, ವಿಜಯಲಕ್ಷ್ಮೀ ಅರಳಿಮರದ ಕಾರ್ಯಕ್ರಮ ನಿರ್ವಹಿಸಿದರು.