ಎಸ್ಸಿ, ಎಸ್ಟಿ ಅನುದಾನ ಬಳಕೆಗೆ ಆಕ್ಷೇಪ

D21-MDG-1P1
Published on

ಮೂಡಿಗೆರೆ: ಪ.ಜಾತಿ,ಪಂಗಡದ ಅಭಿವೃದ್ಧಿಗೆ ಮೀಸಲಿಟ್ಟಿದ್ದ ಅನುದಾನವನ್ನು ಮರಳಿ ಒಪ್ಪಿಸಬೇಕು ಎಂದು ಒತ್ತಾಯಿಸಿ ಬಿಎಸ್‌ಪಿ ಕೇತ್ರ ಸಮಿತಿ ಕಾರ್ಯಕರ್ತರು ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಬಿಎಸ್‌ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಜಾಕೀರ್ ಹುಸೇನ್ ಮಾತನಾಡಿ, 2013ರಿಂದ ರಾಜ್ಯದಲ್ಲಿ ಪ.ಜಾತಿ, ಪಂಗಡದ ಅಭಿವೃದ್ಧಿಗೆ ಬಜೆಟ್‌ನಲ್ಲಿ ಮೀಸಲಿರಿಸಿದ್ದ 70 ಸಾವಿರ ಕೋಟಿ ರೂ.ಅನುದಾನವನ್ನು ಬೇರೆ ಬೇರೆ ಯೋಜನೆಗಳಿಗೆ ಸರ್ಕಾರ ವರ್ಗಾಯಿಸಿಕೊಂಡಿದೆ ಎಂದು ದೂರಿದರು.
2013ರಲ್ಲಿ ಸಿದ್ದರಾಮಯ್ಯ ಸರ್ಕಾರ ಎಸ್ಸಿ, ಎಸ್ಟಿ ಕಾಯ್ದೆ ಜಾರಿಗೆ ತಂದಿತ್ತು. ಕಾಯ್ದೆ ಪ್ರಕಾರ ಬಜೆಟ್‌ನಲ್ಲಿ ಮೀಸಲಿರಿಸಿದ್ದ ಅನುದಾನವನ್ನು ಆ ಜನಾಂಗದವರ ಅಭಿವೃದ್ಧಿಗೆ ಮಾತ್ರ ಬಳಕೆಯಾಗಬೇಕು ಎಂದು ಉಲ್ಲೇಖಿಸಲಾಗಿತ್ತು. 2015ರಲ್ಲಿ ಕಾಯ್ದೆಗೆ ತಿದ್ದುಪಡಿ ತಂದು ಇತರೆ ಯೋಜನೆಗಳಿಗೂ ಎಸ್ಸಿ,ಎಸ್ಟಿ ಅನುದಾನ ಬಳಸಿಕೊಳ್ಳಲು ಅವಕಾಶ ನೀಡಲಾಗಿತ್ತು. 2018ರಲ್ಲಿ ಎಚ್.ಡಿ.ಕುಮಾರಸ್ವಾಮಿ ಸಿಎಂ ಅಗಿದ್ದಾಗ 15 ಸಾವಿರ ಕೋಟಿ ರೂ, ಯಡಿಯೂರಪ್ಪ ಮತ್ತು ಬಸವರಾಜ್ ಬೊಮ್ಮಾಯಿ ಸಿಎಂ ಅಗಿದ್ದಾಗ 29 ಸಾವಿರ ಕೋಟಿ, ಈಗ ಸಿದ್ದರಾಮಯ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ 25 ಸಾವಿರ ಕೋಟಿ ರೂ.ಅನುದಾನ ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.
ಬಿಎಸ್ಪಿ ಕ್ಷೇತ್ರ ಸಮಿತಿ ಅಧ್ಯಕ್ಷ ಎಲ್.ಬಿ.ರಮೇಶ್ ಮಾತನಾಡಿ, ಎಸ್ಸಿ.ಎಸ್ಟಿ ಅನುದಾನವನ್ನು ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಈ ಮೂರು ಪಕ್ಷದ ಸರ್ಕಾರಗಳು ನುಂಗಿ ಹಾಕಿದೆ. ಇದರಿಂದ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳ ವ್ಯಾಸಂಗ, ಈ ಸಮುದಾಯದ ಲಕ್ಷಾಂತರ ಮಂದಿಗೆ ನೀಡಬಹುದಾದ ಉದ್ಯೋಗಕ್ಕೂ ಕತ್ತರಿ ಹಾಕಲಾಗಿದೆ. ಭೂ ರಹಿತರು, ಕೃಷಿ ಕಾರ್ಮಿಕರಿಗೆ 5 ಎಕರೆ ಜಾಗ ನೀಡಲು ಅವಕಾಶವಿತ್ತು. ಅಲ್ಲದೇ ವಾಸದ ಮನೆ, ಸಿಸಿ ರಸ್ತೆ, ಕುಡಿಯುವ ನೀರು, ವಿದ್ಯುತ್, ಕೈಗಾರಿಕೆ, ಸ್ವ ಸಹಾಯ ಗುಂಪುಗಳಿಗೆ ಸಾಲಯೋಜನೆ, ಬಾಡಿಗೆಗೆ ವಾಹನ ನೀಡುವ ಯೋಜನೆ ಸೇರಿದಂತೆ ಹಲವು ಯೋಜನೆಗಳಿಗೆ ಬಳಕೆ ಮಾಡಿಕೊಳ್ಳಬೇಕಾಗಿದ್ದ ಅನುದಾನವನ್ನು ಸರ್ಕಾರಗಳು ಬೇರೆ ಯೋಜನೆಗೆ ದುರ್ಬಳಕೆ ಮಾಡಿಕೊಂಡಿದೆ ಎಂದು ಕಿಡಿಕಾರಿದರು.
ತಹಸೀಲ್ದಾರ್ ರಾಜಶೇಖರ ಮೂರ್ತಿ ಮಾತನಾಡಿದರು. ಮುಖಂಡರಾದ ಜಾಕೀರ್ ಅಲಿ ಖಾನ್, ಪಿ.ಕೆ.ಮಂಜುನಾಥ್, ಬಕ್ಕಿ ಮಂಜು, ಮಹೇಶ್, ಬಾಬಣ್ಣ, ಶಬ್ಬೀರ್ ಹುಸೇನ್, ಹೊನ್ನೇಶ್, ವಸಂತ್, ಕುಮಾರ್, ಎಂ.ಡಿ.ಶಂಕರ್, ಅಭಿಜಿತ್, ಸಯ್ಯದ್, ಹಮೀದ್, ಆಸಿಫ್, ಲಕ್ಷ್ಮಣ್ ದೊಡ್ಡಯ್ಯ, ಮಂಜುನಾಥ್, ಯು.ಎಸ್.ಸುರೇಶ್, ಸತೀಶ್, ರಾಮು ಹರೀಶ್ ನಾಗೇಶ್ ಸಂಜೀವ, ರಮೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net