

ಮಡಿಕೇರಿ: ಖಾಸಗಿ ಬಸ್ ನಿಲ್ದಾಣ ವೃತ್ತಕ್ಕೆ ಸ್ವಾಮಿ ವಿವೇಕಾನಂದರವರ ಹೆಸರಿಡುವ ವಿಚಾರಕ್ಕೆ ಸಿರಿಗನ್ನಡ ವೇದಿಕೆ ಹಾಗೂ ಅಲ್ಲಾರಂಡ ರಂಗ ಚಾವಡಿ ಜಿಲ್ಲಾಧ್ಯಕ್ಷ ಅಲ್ಲಾರಂಡ ವಿಠಲ ನಂಜಪ್ಪ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಮಡಿಕೇರಿ ನಗರಸಭೆಯ ಪೌರಾಯುಕ್ತರು ಖಾಸಗಿ ಬಸ್ ನಿಲ್ದಾಣ ವೃತ್ತಕ್ಕೆ ಸ್ವಾಮಿ ವಿವೇಕಾನಂದರವರ ಹೆಸರಿಡಲಾಗುವುದು. ಆಕ್ಷೇಪಣೆಯಿದ್ದಲ್ಲಿ ಜೂ.೩೦ರೊಳಗೆ ಸೂಚಿಸಬಹುದು ಎಂದು ತಿಳಿಸಿದ್ದರು. ಈ ಹಿನ್ನೆಲೆ ಆಕ್ಷೇಪಣೆ ವ್ಯಕ್ತಪಡಿಸಿದ ವಿಠಲ ನಂಜಪ್ಪರವರು, ಕೊಡಗಿಗಾಗಿ ಪ್ರತಿಫಲಾಪೇಕ್ಷೆ ಇಲ್ಲದೇ ದುಡಿದ ಮಹನೀಯರನ್ನು ನೆನಪಿಸಿಕೊಳ್ಳುವುದು ನಮ್ಮ ಕರ್ತವ್ಯ. ಅಂತವರ ಸಾಲಿನಲ್ಲಿ ಕೊಡಗಿನ ಗಾಂಧಿ ಪಂದ್ಯಂಡ ಬೆಳ್ಳಿಯಪ್ಪರವರಿದ್ದಾರೆ. ಆದ್ದರಿಂದ ಅವರ ಪುತ್ಥಳಿ ಸ್ಥಾಪಿಸುವುದರ ಜತೆಗೆ ಹೆಸರಿಡುವಂತೆ ಮನವಿ ಮಾಡಿದರು.
ಕಳೆದ ೫ ವರ್ಷಗಳಿಂದ ಬೆಳ್ಳಿಯಪ್ಪರವರ ಹೆಸರಿಡುವಂತೆ ನಗರಸಭೆಗೆ ಮನವಿ ಸಲ್ಲಿಸಲಾಗಿತ್ತು. ಇದುವರೆಗೂ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ ಎಂದು ದೂರಿದ ಅವರು, ನಗರದಲ್ಲಿ ಪಂದ್ಯಂಡ ಬೆಳ್ಳಿಯಪ್ಪರ ಸ್ಮಾರಕ ಭವನ ನಿರ್ಮಾಣ ಮಾಡಬೇಕು. ನಗರದ ಕಾವೇರಿ ಕಲಾಕ್ಷೇತ್ರವನ್ನು ನಗರಸಭೆ ನೆಲಸಮ ಮಾಡಿ ನೂತನ ಕಟ್ಟಡ ನಿರ್ಮಾಣ ಮಾಡುವ ಯೋಜನೆ ರೂಪಿಸಿದೆ. ಈ ಸಂದರ್ಭ ನೂತನ ಕಟ್ಟಡಕ್ಕೆ ಪಂದ್ಯಂಡ ಬೆಳ್ಳಿಯಪ್ಪ ಸ್ಮಾರಕ ಭವನ ಎಂದು ಹೆಸರಿಡಬೇಕು. ಇದರಲ್ಲಿ ಸುಸಜ್ಜಿತ ರಂಗಮಂದಿರ ಸ್ಥಾಪನೆ ಮಾಡಬೇಕು ಎಂದು ಒತ್ತಾಯಿಸಿದರು.
ರಂಗಭೂಮಿ ಕಲಾವಿದ ಮಾದೇಟಿರ ಬೆಳ್ಯಪ್ಪ, ಎಫ್‌ಎಂಕೆಎಂಸಿಸಿ ಕಾಲೇಜು ಆರಂಭಕ್ಕೆ ಪಂದ್ಯಂಡ ಬೆಳ್ಳಿಯಪ್ಪ ಕಾರಣರಾಗಿದ್ದಾರೆ. ಇವರ ಹೆಸರು ಶಾಸ್ವತವಾಗಿ ಉಳಿಯುವಂತೆ ಮಾಡಲು ಹಿರಿಯರು ಮಾಡಲಿಲ್ಲ. ಅವರ ಹೆಸರು ಅಜಾರಮರವಾಗಿ ಉಳಿಯುವ ಸಲುವಾಗಿ ಅವರ ಹೆಸರಿಡಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಸಮಾಜ ಸೇವಕರಾದ ಅಯ್ಯಲ್ಪಂಡ ಪುಷ್ಪ ಪೂಣಚ್ಚ, ಸದಾ ಮುದ್ದಪ್ಪ ಉಪಸ್ಥಿತರಿದ್ದರು.