ಅಧಿಕಾರಿಗಳ ಕಾರ್ಯವೈಖರಿಗೆ ಆಕ್ಷೇಪ

SDP TP
Published on

ಸಿದ್ದಾಪುರ: ಪಟ್ಟಣ ಪಂಚಾಯಿತಿ ಅಧಿಕಾರಿಗಳ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ಆರೋಪಗಳು ಬರುತ್ತಿವೆ. ಏಜೆಂಟರ ಮೂಲಕ ಬಂದರೆ ಮಾತ್ರ ಪಪಂ ಕೆಲಸವಾಗುತ್ತದೆ ಎಂಬುದು ಕೆಲ ನೌಕರರ ವರ್ತನೆಯಿಂದ ತಿಳಿದು ಬರುತ್ತಿದೆ ಎಂದು ಪಪಂ ಹಿರಿಯ ಸದಸ್ಯ ಕೆ.ಜಿ. ನಾಯ್ಕ ಹಣಿಜೀಬೈಲ್ ಆರೋಪಿಸಿದರು.

ಸ್ಥಳೀಯ ಪಪಂ ಸಭಾಭವನದಲ್ಲಿ ತಹಸೀಲ್ದಾರ್ ಎಂ.ಆರ್. ಕುಲಕರ್ಣಿ ಅಧ್ಯಕ್ಷತೆಯಲ್ಲಿ ಮಂಗಳವಾರ ಜರುಗಿದ ಪಪಂ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು. ಪಪಂ ವ್ಯಾಪ್ತಿಯಲ್ಲಿ 4500ಕ್ಕಿಂತ ಹೆಚ್ಚು ಖಾಸಗಿ ಆಸ್ತಿಗಳಿವೆ. ಆದರೆ, ದಾಖಲೆಯಲ್ಲಿ ಕೇವಲ 1300 ಆಸ್ತಿಗಳಿವೆ. ಉಳಿದ ಆಸ್ತಿಗಳ ಆದಾಯ ಪಪಂಗೆ ಬರುತ್ತಿಲ್ಲ. ಇದಕ್ಕೆ ಕಾರಣ ಇಲ್ಲಿಯ ನೌಕರರ ವರ್ತನೆ. ಯಾರಾದರೂ ಆಸ್ತಿ ನೋಂದಣಿಗೆ ಬಂದರೆ ಇಲ್ಲದ ಕಾನೂನನ್ನು ತೋರಿಸಿ ಪುನಃ ಅವರು ಪಪಂಗೆ ಬಾರದಂತೆ ಮಾಡುತ್ತಾರೆ . ಅವರು ಅಕ್ರಮ ಕಟ್ಟಡ ಕಟ್ಟಿಕೊಂಡು ವಾಸ ಮಾಡುತ್ತಾರೆ. ಇದನ್ನು ತಪ್ಪಿಸಬೇಕಾದರೆ ಪಪಂಗೆ ಬರುವ ಸಾರ್ವಜನಿಕರಿಗೆ ಸರಿಯಾದ ತಿಳಿವಳಿಕೆ ನೀಡಿ ಆಸ್ತಿ ನೋಂದಣಿ ಸರಳವಾಗುವಂತೆ ಮಾಡಬೇಕು ಎಂದರು.

ಫಾರ್ಮ್ ನಂ. 3 ಬಗ್ಗೆ ಸಾಕಷ್ಟು ಗೊಂದಲವಿದೆ. ಆದರೆ, ಕೆಲವರಿಗೆ ಸುಲಭವಾಗಿ ಆಗುತ್ತದೆ . ಇದು ಜನರ ಸಂಶಯಕ್ಕೆ ಕಾರಣವಾಗುತ್ತಿದೆ. ಪರ್ಯಾಯ ಮಾರ್ಗದ ಬಗ್ಗೆ ಯೋಚಿಸಬೇಕು ಎಂದು ಕೆ.ಜಿ. ನಾಯ್ಕ ಹೇಳಿದರು.

ಪಪಂಗೆ ಕೆಲ ವ್ಯಕ್ತಿಗಳು ಬರುತ್ತಾರೆ. ಅವರು ತಾವು ಯಾವುದೇ ಫಲಾಪೇಕ್ಷೆ ಇಲ್ಲದೆ ಕೆಲಸ ಮಾಡುತ್ತಿದ್ದೇವೆ ಎಂದು ಹೇಳುತ್ತಾರೆ. ನಮ್ಮದು ಸಮಾಜಸೇವೆ ಎಂದು ಹೇಳುತ್ತಾರೆ. ನಾವು ಸಾಕಷ್ಟು ಬಾರಿ ಅವರಿಗೆ ಹೇಳಿದ್ದೇವೆ. ಆದರೆ ಪ್ರಯೋಜನವಾಗಿಲ್ಲ ಎಂದು ಪಪಂ ಅಧಿಕಾರಿಗಳು ಸಭೆಗೆ ತಿಳಿಸಿದರು.

ಬೀದಿ ದೀಪಗಳ ಅಳವಡಿಕೆ ಹಾಗೂ ನಿರ್ವಹಣೆಯನ್ನು ಖಾಸಗಿಯವರಿಗೆ ವಹಿಸಲಾಗಿದೆ. ಅವರು ಸರ್ವೇ ನಡೆಸಲು ಬಂದಾಗ ಹಾಲಿ ಇರುವ ಬೀದಿ ದೀಪಗಳ ಬಗ್ಗೆ ಮಾಹಿತಿ ನೀಡುತ್ತಿಲ್ಲ. ಹಾಲಿ 1594 ಬೀದಿದೀಪಗಳಿದ್ದು ಅವರ ಸರ್ವೇ ಪ್ರಕಾರ 1372 ಎನ್ನುತ್ತಾರೆ. ಉಳಿದ ದೀಪಗಳ ನಿರ್ವಹಣೆ ಯಾರು ಮಾಡಬೇಕು?. ಅಧಿಕಾರಿಗಳು ಬೇಜವಾಬ್ದಾರಿಯಿಂದ ವರ್ತಿಸಿದರೆ ಇಂತಹ ಪರಿಸ್ಥಿತಿಗಳು ಉದ್ಭವಿಸುತ್ತವೆ ಎಂದು ಸದಸ್ಯರು ಅಧಿಕಾರಿಗಳ ಕಾರ್ಯನಿರ್ವಹಣೆ ಕುರಿತು ಕಿಡಿಕಾರಿದರು.

ಸ್ಥಾಯಿ ಸಮಿತಿ ಅಧ್ಯಕ್ಷ ಸುಧೀರ್ ನಾಯ್ಕ , ಸದಸ್ಯರಾದ ವಿನಯ ಹೊನ್ನೆಗುಂಡಿ,ರವಿಕುಮಾರ ನಾಯ್ಕ, ಗುರುರಾಜ್ ಶಾನಭಾಗ,ನಂದನ ಬೋರ್ಕರ್, ಯಶೋಧಾ ಮಡಿವಾಳ, ಕವಿತಾ ಹೆಗಡೆ, ಚಂದ್ರಕಲಾ ನಾಯ್ಕ, ರಾಧಿಕಾ ಕಾನಗೋಡ, ಪಪಂ ಮುಖ್ಯಾಧಿಕಾರಿ ಜೆ.ಆರ್.ನಾಯ್ಕ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net