

ಮಡಿಕೇರಿ: ಸಂಘದ ಸದಸ್ಯರಲ್ಲದ ವ್ಯಕ್ತಿಗಳಿಗೆ ಆಟೋ ಚಲಾಯಿಸಲು ಅವಕಾಶ ನೀಡುವುದಿಲ್ಲ ಎಂದು ಆಟೋ ಮಾಲೀಕ, ಚಾಲಕರ ಸಂಘ ಮತ್ತು ಕೊಡಗು ರಕ್ಷಣಾ ವೇದಿಕೆಯ ಆಟೋ ಚಾಲಕರ ಸಂಘದ ಪದಾಧಿಕಾರಿಗಳು ನೀಡಿರುವ ಹೇಳಿಕೆ ಚಾಲಕರ ಜೀವನದ ಹಕ್ಕಿಗೆ ವಿರುದ್ಧವಾಗಿದೆ ಎಂದು ಮಡಿಕೇರಿ ನಗರದ ಜಾಗೃತ ಆಟೋ ಚಾಲಕರ ಬಳಗದ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಬಳಗದ ಸದಸ್ಯರಾದ ಎಂ.ಬಿ.ದುರ್ಗೆಶ್, ವೇಣು, ಹರ್ಷಿತ್, ಪ್ರಸಾದ್ ಸೇರಿದಂತೆ ೩೦ಕ್ಕೂ ಹೆಚ್ಚು ಆಟೋ ಚಾಲಕರು ಆಟೋ ಮಾಲೀಕ, ಚಾಲಕರ ಸಂಘ ಹಾಗೂ ಸಂಚಾರಿ ಠಾಣಾಧಿಕಾರಿ ಶ್ರೀಧರ್ ಅವರಿಗೆ ಮನವಿ ಸಲ್ಲಿಸಿ ಈ ಕುರಿತು ಚರ್ಚಿಸಿದರು.
ನಂತರ ಮಾತನಾಡಿದ ಸದಸ್ಯರು, ಸಂಘದ ಸದಸ್ಯತ್ವ ಖಡ್ಡಾಯವಾಗಿ ಪಡೆದಿರಬೇಕು ಎಂದು ಪೊಲೀಸ್ ಇಲಾಖೆ ಅಥವಾ ಸಾರಿಗೆ ಇಲಾಖೆ ನಿರ್ಣಯ ಮಾಡಿದರೆ ನಾವು ಒಪ್ಪುತ್ತೇವೆ. ಆದರೆ ಸಂಘದ ಪದಾಧಿಕಾರಿಗಳು ಕಾನೂನಿಗೆ ವಿರುದ್ಧವಾಗಿ ನಿಯಮ ರೂಪಿಸಿದರೆ ಕಾನೂನು ಸಮರ ನಡೆಸುತ್ತೇವೆ ಎಂದು ಹೇಳಿದರು.
ಈಗಾಗಲೇ ಚಾಲಕರು ಅಧಿಕೃತ ಚಾಲನಾ ಪರವಾನಗಿ, ವಾಹನಗಳ ದಾಖಲಾತಿ ಹೊಂದಿಕೊಂಡು ಪೊಲೀಸ್ ಇಲಾಖೆಯಲ್ಲಿ ಎಂ.ಟಿ ಸಂಖ್ಯೆ ಪಡೆದು ವಾಹನ ಚಲಾಯಿಸುತ್ತಿದ್ದಾರೆ. ಎಂ.ಟಿ ಸಂಖ್ಯೆ ಸುರಕ್ಷಿತ ಮಾರ್ಗವಾಗಿದ್ದು, ಈ ಸಂಖ್ಯೆಯನ್ನು ತಿಂಗಳಿಗೊಂದು ಬಾರಿ ಪರೀಕ್ಷೆ ಮಾಡಬಹುದಾಗಿದೆ. ಸದಸ್ಯತ್ವವನ್ನು ನೆಪ ಮಾಡಿಕೊಂಡು ಚಾಲಕರ ವಿರುದ್ಧ ಹಗೆ ಸಾಧನೆ, ವಿನಾಕಾರಣ ಕಿರುಕುಳ ಮತ್ತು ಬ್ಲಾಕ್‌ಮೇಲ್ ಮಾಡುವುದು ಸರಿಯಲ್ಲ. ಗುಂಪುಗಾರಿಕೆ ಮತ್ತು ರಾಜಕೀಯ ಕಾರಣಕ್ಕಾಗಿ ಆಟೋ ಚಾಲಕರಿಗೆ ತೊಂದರೆಯಾದರೆ ಅದಕ್ಕೆ ಆಟೋ ಮಾಲೀಕ, ಚಾಲಕರ ಸಂಘವೇ ನೇರ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.