

ಎನ್.ಆರ್.ಪುರ: ಇತ್ತೀಚಿನ ದಿನಗಳಲ್ಲಿ ಮನಬಂದತೆ ವಿದ್ಯುತ್ ಕಡಿತ ಮಾಡುತ್ತಿರುವುದರಿಂದ ತೊಂದರೆ ಉಂಟಾಗಿದ್ದು, ಮಕ್ಕಳಿಗೆ ಪರೀಕ್ಷಾ ಸಮಯವಾಗಿರುವುದರಿಂದ ಸಮರ್ಪಕವಾಗಿ ವಿದ್ಯುತ್ ಪೂರೈಸಬೇಕು ಎಂದು ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯ ರಘು ಒತ್ತಾಯಿಸಿದರು.
ತಾಪಂ ಸಾಮರ್ಥ್ಯಸೌಧದಲ್ಲಿ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯಲ್ಲಿ ಮಾತನಾಡಿ, ಜನರಿಗೆ ವಿದ್ಯುತ್ ಕಡಿತ ಮಾಡುವ ಬಗ್ಗೆ ಮಾಹಿತಿ ನೀಡುತ್ತಿಲ್ಲ. ಇದರಿಂದ ಜನರಿಗೆ, ಶಾಲಾ ಮಕ್ಕಳಿಗೆ ತೀವ್ರ ತೊಂದರೆಯಾಗುತ್ತಿದೆ. ಅದ್ದರಿಂದ ಸಮರ್ಪಕ ವಿದ್ಯುತ್ ಪೂರೈಸಬೇಕು ಎಂದು ಮೆಸ್ಕಾಂ ಇಲಾಖೆ ಸೀನಿಯರ್ ಅಸಿಸ್ಟೆಂಟ್ ಪ್ರಶಾಂತ್‌ಗೆ ತಿಳಿಸಿದರು.
ಗ್ಯಾರಂಟಿ ಯೋಜನೆಗಳಲ್ಲಿ ಎಲ್ಲರಿಗೂ ಸರಿಯಾಗಿ ಸೌಲಭ್ಯ ದೊರಕುತ್ತಿರುವುದು ಗೃಹ ಜ್ಯೋತಿ ಯೋಜನೆಯಿಂದ ಮಾತ್ರ. ಮೆಸ್ಕಾಂ ಇಲಾಖೆಯಿಂದ ಈ ಯೋಜನೆ ಅನುಷ್ಠಾನದ ಬಗ್ಗೆ ಯಾವುದೇ ದೂರುಗಳಿಲ್ಲ . ಆದರೆ ಸರಿಯಾಗಿ ವಿದ್ಯುತ್ ನೀಡುತ್ತಿಲ್ಲ ಎಂಬುವುದೇ ದೊಡ್ಡ ಸಮಸ್ಯೆಯಾಗಿದೆ ಎಂದರು.
ಮೆಸ್ಕಾಂ ಸೀನಿಯರ್ ಅಸಿಸ್ಟೆಂಟ್ ಪ್ರಶಾಂತ್ ಮಾತನಾಡಿ, ಮಧ್ಯಾಹ್ನದ ವೇಳೆ ಲೋಡ್ ಹೆಚ್ಚಾಗುತ್ತಿರುವುದರಿಂದ ಲೋಡ್ ಶೆಡ್ಡಿಂಗ್ ಮಾಡಲಾಗುತ್ತಿದೆ. ಉಳಿದಂತೆ ಸಂಜೆ, ರಾತ್ರಿ ವಿದ್ಯುತ್ ವ್ಯತ್ಯವಾಗುತ್ತಿಲ್ಲ. ಒಂದು ಬಾಡಿಗೆ ಮನೆಯಿಂದ ಇನ್ನೊಂದು ಬಾಡಿಗೆ ಮನೆಗೆ ಹೋಗಿರುವ ಲಾನುಭವಿಗಳು ಹಳೇ ಬಾಡಿಗೆ ಮನೆ ಮೀಟರ್ ನಂಬರ್‌ಗೆ ನೀಡಿದ ಆಧಾರ್ ಕಾರ್ಡ್‌ನ್ನು ಸೇವಾ ಸಿಂಧು ಪೋರ್ಟಲ್‌ನಲ್ಲಿ ನೋಂದಾಯಿಸಿ ಹಳೇ ಮೀಟರ್ ನಂಬರ್‌ನಿಂದ ಹೊಸ ಬಾಡಿಗೆ ಮನೆ ಮೀಟರ್ ನಂಬರ್ ನೀಡಿ ಡಿ-ಲಿಂಕ್ ಮಾಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಸಮಿತಿ ಸದಸ್ಯರಾದ ಎಸ್.ರಘು, ನಿತ್ಯಾನಂದ, ಬೇಸಿಲ್, ಅಪೂರ್ವ, ಹೂವಮ್ಮ, ಜಿ.ನಾಗರಾಜ್, ಆಹಾರ ಇಲಾಖೆ ಅಧಿಕಾರಿ ಗಣಪತಿ ಇದ್ದರು.