

ಚಳ್ಳಕೆರೆ: ಕೃಷಿ ಪಂಪ್‌ಸೆಟ್‌ಗಳಿಗೆ ರಾತ್ರಿ 8ರಿಂದ 10 ಗಂಟೆ ವರೆಗೆ ವಿದ್ಯುತ್ ಕಡಿತ ಮಾಡುತ್ತಿರುವುದು ಕೃಷಿ ಮತ್ತು ರೈತರ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಅಡ್ಡಿಯಾಗಿದೆ ಎಂದು ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ಹೇಳಿದರು.
ಸಂಘದ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾತ್ರಿ ಪಾಳಯದಲ್ಲಿ ವಿದ್ಯುತ್ ಕಡಿತ ಮಾಡುವುದರಿಂದ ಕರಡಿ, ಹಂದಿ, ಚಿರತೆ ಸೇರಿ ವಿಷಜಂತುಗಳ ಆತಂಕ ಎದುರಾಗಿದೆ. ಶಾಲಾ-ಕಾಲೇಜ್ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಸಮಸ್ಯೆ ಆಗಿದೆ ಎಂದರು.
ಬಯಲುಸೀಮೆ ಪ್ರದೇಶದಲ್ಲಿ ಕೊಳವೆಬಾವಿ ಅವಲಂಬಿಕ ಕೃಷಿ ಚಟುವಟಿಕೆಯೇ ಹೆಚ್ಚು. ಇಂತಹ ಸಂದರ್ಭ ವಿದ್ಯುತ್ ಕಡಿತ ಮಾಡುವುದರಿಂದ ಕೃಷಿ ಉತ್ಪಾದನೆ ಮೇಲೂ ದುಷ್ಪರಿಣಾಮ ಬೀರಲಿದೆ. ಜತೆಗೆ ಅನ್ನದಾತರು ತೀವ್ರ ನಷ್ಟ ಅನುಭವಿಸಬೇಕಾಗುತ್ತದೆ ಎಂದು ಹೇಳಿದರು.
ಆದ್ದರಿಂದ ಏಳು ತಾಸು ಹಗಲಿನಲ್ಲಿಯೇ ಪೂರೈಕೆ ಮಾಡಬೇಕು. ಸಣ್ಣ ಮಳೆ ಹನಿ ಬಿದ್ದರೂ ರಾತ್ರಿಯೆಲ್ಲ ವಿದ್ಯುತ್ ತೆಗೆಯುತ್ತಾರೆ. ಇದರಿಂದ ಕೃಷಿಕರು ಬದುಕುವುದು ಹೇಗೆ? ಕೂಡಲೇ ರೈತರ ಸಮಸ್ಯೆ ಅರಿತು ಹಗಲಿನಲ್ಲಿ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಒತ್ತಾಯಿಸಿದರು.
ಮುಂಗಾರು ಆರಂಭದಿಂದ ಮಳೆ ಕೊರತೆ ಆಗಿರುವುದರಿಂದ ಕೂಡಲೇ ರಾಜ್ಯ ಸರ್ಕಾರ ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಬೇಕು. ಸಕಾಲಕ್ಕೆ ಬೆಳೆ ನಷ್ಟ ಮತ್ತು ಬೆಳೆ ವಿಮೆ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಮುಖಂಡರಾದ ಜಿ.ಎಚ್.ತಿಪ್ಪೇಸ್ವಾಮಿ, ಹನುಮಂತನಹಳ್ಳಿ ಹಾವಿನಪ್ಪ, ಬಾಲಣ್ಣ, ರುದ್ರಮ್ಮನಹಳ್ಳಿ ತಿಪ್ಪೇಸ್ವಾಮಿ ಇದ್ದರು.